ಬೆಂಗಳೂರು: ನಂದಿನಿ ಲೇಔಟ್‌ನಲ್ಲಿರುವ ವೀಣಾ ವಿದ್ಯಾ ಸಂಸ್ಥೆಯಲ್ಲಿ ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ನಾಲ್ಕನೇ ತರಗತಿ ಬಾಲಕನ ಮೇಲೆ ಶಿಕ್ಷಕಿ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜನವರಿ 10ರಂದು ಈ ಘಟನೆ ನಡೆದಿದ್ದು, ಶಿಕ್ಷಕಿ ಬಾಲಕನಿಗೆ ಬಾಸುಂಡೆ ಬರುವ ಮಟ್ಟಿಗೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಾಲಕನ ದೇಹದ ಮೇಲೆ ಬಾಸುಂಡೆ ಗುರುತುಗಳನ್ನು ಕಂಡ ತಾಯಿ ಲಕ್ಷ್ಮೀ ಆಘಾತಕ್ಕೊಳಗಾಗಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಲ್ ಮಾಡಿರುವ ಬಗ್ಗೆ ಪೋಷಕರಿಗೆ ತಿಳಿಸಿದರೆ ಕುತ್ತಿಗೆ ಹಿಸುಕುವುದಾಗಿ ಶಿಕ್ಷಕಿ ಬೆದರಿಸಿದ್ದರಿಂದ ಬಾಲಕ ಎರಡು ತಿಂಗಳ ಕಾಲ ಮೌನವಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ, ಇತ್ತೀಚೆಗೆ ಮಗನನ್ನು ನೋಡಲು ಬಂದಾಗ ಆತನ ಕೈ ಹಾಗೂ ದೇಹದ ಮೇಲೆ ಗಾಯದ ಗುರುತುಗಳನ್ನು ಕಂಡು ವಿಚಾರಿಸಿದ್ದಾರೆ. ಈ ವೇಳೆ ಬಾಲಕ ಅಳುತ್ತಾ ಶಿಕ್ಷಕಿಯಿಂದ ನಡೆದ ಹಲ್ಲೆಯ ಸಂಪೂರ್ಣ ವಿಚಾರವನ್ನು ಬಹಿರಂಗಪಡಿಸಿದ್ದಾನೆ. ಇದಾದ ಬಳಿಕ ಬಾಲಕ ಶಾಲೆಗೆ ಹೋಗುವುದನ್ನೇ ನಿರಾಕರಿಸಿದ್ದಾನೆ.
ಘಟನೆ ಬಗ್ಗೆ ಶಾಲಾ ಮುಖ್ಯಸ್ಥರನ್ನು ಪ್ರಶ್ನಿಸಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಪೋಷಕರು ಆರೋಪಿಸಿದ್ದಾರೆ. ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ ಎಂಬ ಮಾಹಿತಿ ನೀಡಿದ ಶಾಲೆ, ವಾಸ್ತವದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತಿಳಿದು ಮತ್ತಷ್ಟು ಆಕ್ರೋಶ ವ್ಯಕ್ತವಾಗಿದೆ. ಬಾಲಕನ ತಾಯಿ ಇದೀಗ ಶಿಕ್ಷಣ ಇಲಾಖೆಯ BEOಗೆ ದೂರು ನೀಡಲು ಮುಂದಾಗಿದ್ದಾರೆ.


