ಬೆಂಗಳೂರು : ಒಂದೆಡೆ ಸಾರಿಗೆ ನೌಕರರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು ಸರ್ಕಾರಕ್ಕೆ ಬೇಡಿಕೆ ಈಡೇರಿಸುವ ಬಗ್ಗೆ ಗಡುವನ್ನು ನೀಡಿದ್ದಾರೆ , ಇನ್ನೊಂದೆಡೆ ಗುಟ್ಕಾ ಜಾಹಿರಾತುಗಳು ಮತ್ತು ಜಾಹಿರಾತಿಗೆ ಸಹಕರಿಸಿದವರ ವಿರುದ್ಧ ಕನ್ನಡಿಗರು ಬಹುದಿನದಿಂದಲೂ ವಿವಿಧ ರೀತಿಯ ಪ್ರತಿಭಟನೆಗಳನ್ನು ಮಾಡುತ್ತ ಬಾರಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಆಕ್ರೋಶದ ಕಿಚ್ಚು ಇನ್ನಷ್ಟು ಹೆಚ್ಚಾಗಿದ್ದು ಸಾರಿಗೆ ಇಲಾಖೆಯ ಬಿಎಂಟಿಸಿ , ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಹಾಕಿದ್ದ ಪೋಸ್ಟರ್ ಗಳನ್ನೂ ಕಿತ್ತೆಸೆದು, ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಇದೀಗ ಉತ್ತರ ಕರ್ನಾಟಕದಲ್ಲಿ ಶುರುವಾದ ಜ್ವಾಲೆ ಬೆಂಗಳೂರಿಗೂ ಮುಟ್ಟಿದೆ . ವಿದ್ಯಾರ್ಥಿಗಳು , ವಿವಿಧ ಕನ್ನಡ ಪರ ಸಂಘಟನೆಗಳು ಸಾರಿಗೆ ಬಸ್‌ಗಳ ಮೇಲೆ ಅಂಟಿಸಿದ್ದ ತಂಬಾಕು ಜಾಹಿರಾತುಗಳನ್ನ ಕಿತ್ತೆಸೆಯುತ್ತಿದ್ದಾರೆ.
ನಗರದ ಮೆಜೆಸ್ಟಿಕ್, ಕೆಆರ್ ಪುರಂ ಬಸ್ ನಿಲ್ದಾಣಗಳಲ್ಲಿ ನಿಂತಿದ್ದಂತಹ ಬಸ್ ಗಳ ಮೇಲೆ ಅಂಟಿಸಲಾದ ವಿಮಲ್, ಆರ್‌ಎಂಡಿ ಸೇರಿ ತಂಬಾಕು ಉತ್ಪನ್ನಗಳ ಜಾಹಿರಾತು ಪೋಸ್ಟರ್‌ಗಳನ್ನ ರೂಪೇಶ್ ರಾಜಣ್ಣ ನೇತೃತ್ವದ ಯುವ ಕರ್ನಾಟಕ ತಂಡದ ಕಾರ್ಯಕರ್ತರು ಹರಿದು ಹಾಕಿದ್ದಾರೆ. ಸಾರ್ವಜನಿಕರು ಕೂಡ ಕನ್ನಡ ಪರ ಹೋರಾಟಗಾರರಿಗೆ ಬೆಂಬಲಿಸಿ, ಕೂಡಲೇ ಎಲ್ಲಾ ಬಸ್‌ಗಳ ಮೇಲೆ ಅಂಟಿಸಿರೋ ಪೋಸ್ಟರ್‌ಗಳನ್ನ ತೆರವು ಮಾಡಬೇಕು, ಆದಾಯ ಆಸೆ ಬಿಟ್ಟು, ಸಮಾಜದ ಸ್ವಾಸ್ಥ್ಯವನ್ನ ಕಾಪಾಡಿ, ಹೀಗೆ ಮೊಂಡುತನ ಪ್ರದರ್ಶನ ಮಾಡೋದು ಸರಿಯಲ್ಲ, ಇಲ್ಲದಿದ್ದರೆ ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲ್ಲಿಸಿ ಅಂಟಿಸಲಾಗಿರುವ ಜಾಹಿರಾತುಗಳಿಗೆ ಮಸಿ ಬಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.


