ಬೆಂಗಳೂರು: ನೋಡಲು ಶ್ರೀಮಂತ ಮಹಿಳೆಯಂತೆ ಕಾಣುವ ಗ್ಲಾಮರಸ್ ಲುಕ್, ಮುಖಕ್ಕೆ ದುಬಾರಿ ಮೇಕಪ್, ಮೈತುಂಬಾ ರೇಷ್ಮೆ ಸೀರೆ ಹಾಗೂ ಒಡವೆಗಳು. ಇಂತಹ ಸೋಗಿನಲ್ಲಿ ಜಾತ್ರೆ ಮತ್ತು ದೇವಸ್ಥಾನಗಳಿಗೆ ಲಗ್ಗೆ ಇಟ್ಟು ಮಹಿಳೆಯರ ಕತ್ತಿನಲ್ಲಿರುವ ಸರಗಳನ್ನು ಕ್ಷಣಾರ್ಧದಲ್ಲಿ ಎಗರಿಸುತ್ತಿದ್ದ ಚಾಲಾಕಿ ಮಹಿಳೆ ಹಾಗೂ ಆಕೆಯ ಪತಿಯನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಮ್ಮಸಂದ್ರದ ನಿವಾಸಿಗಳಾದ ಗಾಯತ್ರಿ ಮತ್ತು ಶ್ರೀಕಾಂತ್ ಎಂದು ಗುರುತಿಸಲಾಗಿದ್ದು, ಸುಮಾರು 60 ಲಕ್ಷ ರೂಪಾಯಿ ಮೌಲ್ಯದ 398 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಿಂಗಳಿಗೆ 4 ಲಕ್ಷ ರೂ. ಕೇವಲ ಮೇಕಪ್‌ಗೆ!
ಆರೋಪಿ ಗಾಯತ್ರಿ ಐಷಾರಾಮಿ ಜೀವನ ಮತ್ತು ಸೌಂದರ್ಯದ ಪ್ರದರ್ಶನಕ್ಕೆ ತಿಂಗಳಿಗೆ ಬರೋಬ್ಬರಿ 4 ಲಕ್ಷ ರೂಪಾಯಿಯನ್ನು ಕೇವಲ ಮೇಕಪ್ ಮತ್ತು ಸೌಂದರ್ಯವರ್ಧಕಗಳಿಗಾಗಿ ಖರ್ಚು ಮಾಡುತ್ತಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಭಕ್ತಾದಿಗಳಂತೆ ಬಣ್ಣ ಬಣ್ಣದ ರೇಷ್ಮೆ ಸೀರೆ ಉಟ್ಟು ಮೇಕಪ್ ಮಾಡಿಕೊಂಡು ಜನದಟ್ಟಣೆ ಇರುವ ಜಾತ್ರೆ ಮತ್ತು ದೇವಸ್ಥಾನಗಳಿಗೆ ಈ ದಂಪತಿ ಭೇಟಿ ನೀಡುತ್ತಿದ್ದರು.
ಮಹಿಳೆಯರ ಗುಂಪಿನಲ್ಲಿ ಸೇರಿ ಗಾಯತ್ರಿ, ತನ್ನ ಗ್ಲಾಮರಸ್ ಲುಕ್‌ನಿಂದ ಎಲ್ಲರ ಗಮನ ಬೇರೆಡೆಗೆ ಸೆಳೆಯುತ್ತಿದ್ದಳು. ಜನರು ದೇವರ ದರ್ಶನದಲ್ಲಿ ಮಗ್ನರಾದಾಗ ಸದ್ದಿಲ್ಲದೆ ಕತ್ತರಿ ಹಾಕಿ ಚಿನ್ನದ ಸರಗಳನ್ನು ದೋಚುತ್ತಿದ್ದಳು. ಪತಿ ಶ್ರೀಕಾಂತ್ ಆಕೆಗೆ ಸಾಥ್ ನೀಡುತ್ತಿದ್ದ.
ಈ ಹಿಂದೆ ಪಾತ್ರೆ ವ್ಯಾಪಾರ ಮಾಡುತ್ತಿದ್ದ ಈ ದಂಪತಿ, ಸುಲಭವಾಗಿ ಹಣ ಗಳಿಸಲು ಕಳ್ಳತನಕ್ಕೆ ಇಳಿದಿದ್ದರು. ಇವರ ವಿರುದ್ಧ ಈಗಾಗಲೇ ಹುಣಸೂರು, ಚಿಕ್ಕಬಳ್ಳಾಪುರ, ಚನ್ನರಾಯಪಟ್ಟಣ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣಗಳಿವೆ.
ಸಿಸಿಟಿವಿ ನೀಡಿದ ಸುಳಿವು:
ಇತ್ತೀಚೆಗೆ ದೇವಸಂದ್ರದ ಮಾರಿಯಮ್ಮ ದೇವಾಲಯಕ್ಕೆ ತೆರಳಿದ್ದ ಲಕ್ಷ್ಮಮ್ಮ ಎಂಬುವವರ 30 ಗ್ರಾಂ ಚಿನ್ನದ ಸರ ಕಳವಾಗಿತ್ತು. ಇನ್ಸ್‌ಪೆಕ್ಟರ್ ಬಿ. ರಾಮಮೂರ್ತಿ ನೇತೃತ್ವದ ತಂಡ ದೇವಾಲಯದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅತಿಯಾದ ಮೇಕಪ್ ಮಾಡಿಕೊಂಡಿದ್ದ ಗಾಯತ್ರಿಯ ಚಲನವಲನಗಳು ಶಂಕೆ ಮೂಡಿಸಿದವು. ಇದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ದಂಪತಿಯನ್ನು ಸೆರೆಹಿಡಿಯಲಾಗಿದೆ. ಸದ್ಯ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ..


