ಬೆಂಗಳೂರು: ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್ ಅವರು ಕುಡಿದು ವಾಹನ ಚಲಾಯಿಸಿ ಸರಣಿ ಅಪಘಾತ ಮಾಡಿದ ಘಟನೆ ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ನಟನ ವಿರುದ್ಧ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕಳೆದ ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆಯ ಕಮಾಂಡೋ ಆಸ್ಪತ್ರೆ ಸಿಗ್ನಲ್ ಬಳಿ ಈ ಘಟನೆ ನಡೆದಿದೆ. ಸಿಗ್ನಲ್‌ನಲ್ಲಿ ವಾಹನಗಳು ನಿಂತಿದ್ದ ವೇಳೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಮಯೂರ್ ಪಟೇಲ್ ಅವರ ಫಾರ್ಚೂನರ್ ಕಾರು, ಮುಂದಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ನಾಲ್ಕು ಕಾರುಗಳು ಜಖಂಗೊಂಡಿದ್ದು, ಸರಣಿ ಅಪಘಾತ ಸಂಭವಿಸಿದೆ.
ಅಪಘಾತದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಹಲಸೂರು ಸಂಚಾರ ಪೊಲೀಸರು ನಟನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಅವರು ಮದ್ಯಪಾನ ಮಾಡಿರುವುದು (Drunk and Drive) ದೃಢಪಟ್ಟಿದೆ. ಅಪಘಾತದಲ್ಲಿ ಎರಡು ಸ್ವಿಫ್ಟ್ ಡಿಜೈರ್ ಕಾರುಗಳು ಹಾಗೂ ಒಂದು ಸರ್ಕಾರಿ ಕಾರು ತೀವ್ರವಾಗಿ ಜಖಂಗೊಂಡಿವೆ.
ಅಪಘಾತಕ್ಕೊಳಗಾದ ಕಾರಿನ ಚಾಲಕ ಶ್ರೀನಿವಾಸ್ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅಜಾಗರೂಕ ಚಾಲನೆ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದಡಿ ನಟನ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಯೂರ್ ಪಟೇಲ್ ಅವರ ಫಾರ್ಚೂನರ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.


