ಬೆಂಗಳೂರು: ವರದಕ್ಷಿಣೆ ಕಿರುಕುಳದ ದಾರುಣ ಘಟನೆ ಬೆಳಕಿಗೆ ಬಂದಿದೆ. ವಿವಾಹವಾಗಿ ಕೇವಲ ಎರಡು ವರ್ಷ ಕಳೆಯುವಷ್ಟರಲ್ಲೇ ಕೀರ್ತಿ ಎಂಬ ಯುವತಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪತಿಯ ಅತಿಯಾದ ಹಣದ ಆಸೆ ಹಾಗೂ ಕಿರುಕುಳವೇ ಮಗಳ ಸಾವಿಗೆ ಕಾರಣ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಮೃತ ಕೀರ್ತಿ ಹಾಗೂ ಗುರುಪ್ರಸಾದ್ ಅವರ ವಿವಾಹ 2023ರ ನವೆಂಬರ್‌ನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಮಗಳ ಸುಖ ಸಂಸಾರಕ್ಕಾಗಿ ಪೋಷಕರು ಸುಮಾರು 30 ರಿಂದ 35 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಗುರುಪ್ರಸಾದ್‌ನ ಅಸಲಿ ರೂಪ ಹೊರಬಂದಿತ್ತು ಎನ್ನಲಾಗಿದೆ.
ಕಳೆದ ಎರಡು ತಿಂಗಳಿಂದ ಕೀರ್ತಿಗೆ ಪತಿ ತೀವ್ರ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಈ ಬಗ್ಗೆ ಆಕೆ ತನ್ನ ತಾಯಿ ಬಳಿ ಅಳಲು ತೋಡಿಕೊಂಡಿದ್ದರು. 2025ರ ಡಿಸೆಂಬರ್‌ನಲ್ಲಿ ಮನೆ ಕಟ್ಟಿಸುವ ನೆಪದಲ್ಲಿ ಗುರುಪ್ರಸಾದ್ ಮತ್ತೆ 10 ಲಕ್ಷ ರೂಪಾಯಿ ಹಣಕ್ಕಾಗಿ ಪೀಡಿಸಿದ್ದ. ಮಗಳ ಸಂಸಾರ ಹಸನಾಗಲಿ ಎಂದು ಪೋಷಕರು ಆತನಿಗೆ 8 ಲಕ್ಷ ರೂಪಾಯಿ ಹಣವನ್ನೂ ನೀಡಿದ್ದರು. ಆದರೂ ಹಣದ ದಾಹ ತೀರದ ಪತಿ, ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ಮುಂದುವರಿಸಿದ್ದ ಎಂದು ಪೋಷಕರು ದೂರಿದ್ದಾರೆ.
ಕೀರ್ತಿ ಮೃತಪಟ್ಟ ವಿಷಯವನ್ನು ಪೋಷಕರಿಗೆ ತಿಳಿಸುವಾಗಲೂ ಪತಿ ನಾಟಕವಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. “ಮಗಳಿಗೆ ತಲೆ ತಿರುಗಿ ಬಿದ್ದಿದ್ದಾಳೆ, ಆಸ್ಪತ್ರೆಗೆ ಸೇರಿಸಿದ್ದೇವೆ” ಎಂದು ನಂಬಿಸಿ, ನಂತರ ಸಾವಿನ ಸುದ್ಧಿ ತಿಳಿಸಿದ್ದಾನೆ ಎನ್ನಲಾಗಿದೆ. ಆದರೆ, ಕೀರ್ತಿ ಶವವಾಗಿ ಪತ್ತೆಯಾಗಿರುವುದು ಕುಟುಂಬಸ್ಥರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ.
ಸದ್ಯ ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಗುರುಪ್ರಸಾದ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ..


