ಬೆಳಗಾವಿ: 400 ಕೋಟಿ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೆ. ರಾಮರಾಜನ್ ಅವರು ಸುದ್ದಿಗೋಷ್ಠಿ ನಡೆಸಿ, ನಾಸಿಕ್ ಪೊಲೀಸರ ಪತ್ರ ಹಾಗೂ ಈ ನಿಗೂಢ ದರೋಡೆಯ ಹಿಂದಿನ ಅಸಲಿ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
ಜೂನ್ ಅಥವಾ ಅಕ್ಟೋಬರ್‌ನಲ್ಲಿ ನಡೆದಿದೆ ಎನ್ನಲಾದ ಈ ದರೋಡೆ ಬಗ್ಗೆ ಮಹಾರಾಷ್ಟ್ರದ ನಾಸಿಕ್ ಎಸ್ಪಿ ಅವರು ಜನವರಿ 6 ರಂದು ಬೆಳಗಾವಿ ಎಸ್ಪಿಗೆ ಪತ್ರ ಬರೆದಿದ್ದರು. ಚೋರ್ಲಾ ಘಾಟ್ ಬಳಿ 400 ಕೋಟಿ ರೂಪಾಯಿ ಹೈಜಾಕ್ ಆಗಿರುವ ಬಗ್ಗೆ ಆ ಪತ್ರದಲ್ಲಿ ಪ್ರಾಥಮಿಕ ಮಾಹಿತಿ ಇತ್ತು. ಈ ಪತ್ರ ಸಿಕ್ಕ ತಕ್ಷಣ ಬೆಳಗಾವಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
2025ರ ಅಕ್ಟೋಬರ್ 22 ರಂದು ಸಂದೀಪ್ ದತ್ತಾ ಪಾಟೀಲ್ ಎಂಬುವವರನ್ನು ವಿರಾಟ್ ಗಾಂಧಿ ಮತ್ತು ವಿಶಾಲ್ ನಾಯ್ಡು ತಂಡ ಅಪಹರಿಸಿತ್ತು. ನೀನೇ ಆ 400 ಕೋಟಿ ದರೋಡೆ ಮಾಡಿದ್ದೀಯಾ ಎಂದು ಕಿಡ್ನ್ಯಾಪರ್ಸ್ ಸಂದೀಪ್ ಮೇಲೆ ಹಲ್ಲೆ ಮಾಡಿದ್ದರು. ಪೊಲೀಸರ ಬಳಿ ಬಂದ ಸಂದೀಪ್, ನಾನು ದರೋಡೆ ಮಾಡಿಲ್ಲ, ಆದರೆ ಕಿಡ್ನ್ಯಾಪರ್ಸ್ ಅಷ್ಟು ದೊಡ್ಡ ಮೊತ್ತದ ಹಣ ರಾಬರಿ ಆಗಿದೆ ಎಂದು ಹೇಳುತ್ತಿದ್ದರು” ಎಂದು ಹೇಳಿಕೆ ನೀಡಿದ್ದಾನೆ.
ಮಾಹಿತಿ ಗಂಭೀರವಾಗಿದ್ದರಿಂದ ಎಸ್ಪಿ ರಾಮರಾಜನ್ ಅವರು ಒಬ್ಬರು ಪಿಎಸ್‌ಐ ಹಾಗೂ ಮರಾಠಿ ಭಾಷೆ ಬಲ್ಲ ಮೂವರು ಪೊಲೀಸರ ತಂಡವನ್ನು ನಾಸಿಕ್‌ಗೆ ಕಳುಹಿಸಿದ್ದರು. ಜನವರಿ 21 ರಂದು ಈ ತಂಡ ನಾಸಿಕ್ ಎಸ್‌ಐಟಿಯನ್ನು ಭೇಟಿ ಮಾಡಿದೆ. ಆದರೆ, ಪ್ರಮುಖ ಆರೋಪಿಗಳನ್ನು ವಿಚಾರಣೆ ನಡೆಸಲು ಮಹಾರಾಷ್ಟ್ರ ಪೊಲೀಸರು ಸದ್ಯಕ್ಕೆ ತಾಂತ್ರಿಕ ಕಾರಣಗಳಿಂದ ಅವಕಾಶ ನೀಡಿಲ್ಲ.
ಸಂದೀಪ್ ಪಾಟೀಲ್ ಈ ದರೋಡೆಯನ್ನು ಕಣ್ಣಾರೆ ಕಂಡಿಲ್ಲ. ಆತ ಕೇವಲ ಕಿಡ್ನ್ಯಾಪರ್ಸ್ ಹೇಳಿದ್ದನ್ನು ತಿಳಿಸಿದ್ದಾನೆ. ದರೋಡೆಯಾದ ಹಣದ ಮಾಲೀಕರು ಅಥವಾ ಚಾಲಕರು ಇದುವರೆಗೆ ಯಾವುದೇ ದೂರು ನೀಡಿಲ್ಲ. ದರೋಡೆಯಾಗಿರುವುದು ಚಲಾವಣೆ ರಹಿತ 2000 ರೂ. ಮುಖಬೆಲೆಯ ನೋಟುಗಳು ಎಂದು ಶಂಕಿಸಲಾಗಿದೆ. ಯಾರಾದರೂ ಬಂದು ದೂರು ನೀಡಿದರೆ ಅಥವಾ ಮಹಾರಾಷ್ಟ್ರ ಪೊಲೀಸರು ಕೇಳಿದರೆ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಬೆಳಗಾವಿ ಪೊಲೀಸರು ಸಿದ್ಧರಿದ್ದಾರೆ” ಎಂದು ಎಸ್ಪಿ ಕೆ. ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.


