ಬೆಂಗಳೂರು: ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಅವರಿಗೆ ‘ದ್ವೇಷ ಭಾಷಣ ಮಸೂದೆ-2025’ರ ಅಡಿಯಲ್ಲಿ ಪೊಲೀಸರು ನೋಟಿಸ್ ನೀಡಿರುವುದು ತಪ್ಪು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಮಸೂದೆಯು ಇನ್ನೂ ಕಾನೂನಾಗಿ ಜಾರಿಯಾಗದ ಹಿನ್ನೆಲೆಯಲ್ಲಿ ಈ ಕ್ರಮ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನೋಟಿಸ್ ವಿವಾದದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ದ್ವೇಷ ಭಾಷಣ ತಡೆ ಮಸೂದೆಗೆ ಇನ್ನೂ ರಾಜ್ಯಪಾಲರ ಅಂಕಿತ ಬಿದ್ದಿಲ್ಲ. ಅದು ಇನ್ನೂ ಕಾಯ್ದೆಯಾಗಿ ಜಾರಿಗೆ ಬಂದಿಲ್ಲ. ಹೀಗಿರುವಾಗ ಆ ಮಸೂದೆಯನ್ನು ಉಲ್ಲೇಖಿಸಿ ನೋಟಿಸ್ ನೀಡಿರುವುದು ತಪ್ಪು.
ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ದ್ವೇಷ ಭಾಷಣ ತಡೆಯಲು ಹಲವು ಸೆಕ್ಷನ್‌ಗಳಿವೆ. ಪೊಲೀಸರು ಅವುಗಳ ಅಡಿಯಲ್ಲಿ ನೋಟಿಸ್ ನೀಡಬಹುದಿತ್ತು. ಅದನ್ನು ಬಿಟ್ಟು ಇನ್ನೂ ಜಾರಿಯಾಗದ ಮಸೂದೆಯನ್ನು ಬಳಸಿದ್ದು ಸರಿಯಲ್ಲ. ಪೊಲೀಸರು ಯಾವ ಉದ್ದೇಶದಿಂದ ಮತ್ತು ಯಾರ ಸೂಚನೆ ಮೇರೆಗೆ ಈ ರೀತಿ ಮಾಡಿದ್ದಾರೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತರಿಸಿಕೊಳ್ಳುವುದಾಗಿ ಸಚಿವರು ತಿಳಿಸಿದರು.


