ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮೇರೆ ಮೀರಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ, ಅಧಿಕಾರದ ಮದದಲ್ಲಿ ಮೆರೆಯುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ರಾಜಶೇಖರ್ ಹಿಟ್ನಾಳ್ ಹೇಳಿಕೆಗೆ ತೀವ್ರ ಆಕ್ಷೇಪ
ವಿದೇಶಿ ಪ್ರವಾಸಿ ಮಹಿಳೆಯ ಮೇಲೆ ನಡೆದ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ‘ಸಣ್ಣ ಘಟನೆ’ ಎಂದು ಕರೆದ ಸಂಸದ ರಾಜಶೇಖರ್ ಹಿಟ್ನಾಳ್ ವಿರುದ್ಧ ಛಲವಾದಿ ಕೆಂಡಾಮಂಡಲವಾಗಿದ್ದಾರೆ.
ಒಬ್ಬ ಸಂಸದರಾಗಿ ಅತ್ಯಾಚಾರದಂತಹ ಅಂತರಾಷ್ಟ್ರೀಯ ಮಟ್ಟದ ಘಟನೆಯನ್ನು ಕೇವಲವಾಗಿ ನೋಡುವುದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ಕರ್ನಾಟಕದ ಗೌರವ ಹರಾಜು ಹಾಕಿರುವ ಹಿಟ್ನಾಳ್ ಅವರನ್ನು ತಕ್ಷಣವೇ ಕಾಂಗ್ರೆಸ್‌ನಿಂದ ಉಚ್ಚಾಟಿಸಬೇಕು,” ಎಂದು ಆಗ್ರಹಿಸಿದರು.
ಜನಾರ್ದನ ರೆಡ್ಡಿ ಮನೆಗೆ ಬೆಂಕಿ: ಸರ್ಕಾರಕ್ಕೆ ಪ್ರಶ್ನೆ
ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿರುವ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿದರು. ಜೀವ ಸಮೇತ ಸುಡುತ್ತೇನೆ, ಮನೆ ಸುಡುತ್ತೇನೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಈ ಕೃತ್ಯ ನಡೆದಿದೆ. ಸಿಎಂ ಅವರೇ, ನಿಮ್ಮಲ್ಲಿ ಮಾನವೀಯತೆ ಮತ್ತು ಸಮಾಜವಾದದ ರಕ್ತ ಹರಿಯುತ್ತಿದ್ದರೆ ಈ ಗೂಂಡಾವರ್ತಿಯ ವಿರುದ್ಧ ಕ್ರಮ ಕೈಗೊಳ್ಳಿ,” ಎಂದು ಒತ್ತಾಯಿಸಿದರು.
ಅಧಿಕಾರಿಯ ಮೇಲೆ ದರ್ಪ: ರಾಜೀವ್ ಗೌಡ ರಕ್ಷಣೆ?
ಶಿಡ್ಲಘಟ್ಟದಲ್ಲಿ ಅಧಿಕಾರಿಯ ಮೇಲೆ ದರ್ಪ ತೋರಿದ ರಾಜೀವ್ ಗೌಡನನ್ನು ಸರ್ಕಾರ ರಕ್ಷಿಸುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ರಾಜೀವ್ ಗೌಡ ಹಿರಿಯ ಸಚಿವರ ಪತ್ನಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿಯಿದೆ. ಅವರನ್ನು ಕೆ.ಹೆಚ್. ಮುನಿಯಪ್ಪ ರಕ್ಷಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ನಿಮ್ಮ ಪೊಲೀಸ್ ಇಲಾಖೆ ಏನು ಕಡುಬು ತಿನ್ನುತ್ತಿದೆಯೇ?” ಎಂದು ಖಾರವಾಗಿ ಪ್ರಶ್ನಿಸಿದರು.


