ಹಾಸನ: “ಜೆಡಿಎಸ್ ಪಕ್ಷವನ್ನು ಹಾಗೂ ರೇವಣ್ಣ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ನಡೆಸುತ್ತಿರುವ ಆಟಗಳು ಬಹಳ ದಿನ ನಡೆಯುವುದಿಲ್ಲ. ಎಲ್ಲದಕ್ಕೂ ಕಾಲ ಬರಲಿದೆ, ಅಲ್ಲಿಯವರೆಗೆ ಸ್ವಲ್ಪ ಕಾಯಿರಿ,” ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕಾಂಗ್ರೆಸ್ ಸರ್ಕಾರದ ವಿರುದ್ದ ಹಾಸನದಲ್ಲಿ ಗುಡುಗಿದ್ದಾರೆ.
ಹಾಸನದ ಬೂವನಹಳ್ಳಿಯಲ್ಲಿ ನಡೆದ ಜೆಡಿಎಸ್‌ನ ಬೃಹತ್ ‘ಜನತಾ ಸಮಾವೇಶ’ದಲ್ಲಿ ಮಾತನಾಡಿದ ಅವರು, ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹಾಗೂ ತನಿಖಾ ಸಂಸ್ಥೆಗಳ ದುರ್ಬಳಕೆಯ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದರು.
ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖಾ ತಂಡಕ್ಕೆ ಸರ್ಕಾರ ಬಹುಮಾನ ಘೋಷಿಸಿರುವುದನ್ನು ಕಟುವಾಗಿ ಟೀಕಿಸಿದ ದೇವೇಗೌಡರು, “ರೇವಣ್ಣ ಕುಟುಂಬವನ್ನು ಬೀದಿಗೆ ತಂದಿದ್ದೇವೆ ಎಂಬ ಖುಷಿಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳಿಗೆ ಬಹುಮಾನ ನೀಡುತ್ತಿದೆ. ರೇವಣ್ಣ ಹಗಲು ರಾತ್ರಿ ಶ್ರಮಿಸಿ ಅಭಿವೃದ್ಧಿ ಮಾಡಿದ ಜಿಲ್ಲೆಯಿದು. ಆತನನ್ನು ಅರೆಸ್ಟ್ ಮಾಡಿದ ಅಧಿಕಾರಿಗಳಿಗೆ ಈಗ ಉಡುಗೊರೆ ಕೊಡುತ್ತಿರುವುದು ಎಷ್ಟು ಸರಿ” ಎಂದು ಪ್ರಶ್ನಿಸಿದರು.
ತಮ್ಮ ರಾಜಕೀಯ ಏಳುಬೀಳುಗಳನ್ನು ಸ್ಮರಿಸಿದ ದೊಡ್ಡಗೌಡರು, ಕಾಂಗ್ರೆಸ್ ವಿರುದ್ಧ ಹಳೆಯ ಘಟನೆಗಳನ್ನು ನೆನಪಿಸಿಕೊಂಡು ವಾಗ್ದಾಳಿ ನಡೆಸಿದರು. ನಾನು ಹಿಂದೆ ಇಲ್ಲೇ ಸೋತಿದ್ದೆ, ಆದರೆ ಅದೇ ಜನ ನನ್ನನ್ನು ಮತ್ತೆ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದರು. ನನ್ನನ್ನು ಮತ್ತು ಕುಮಾರಸ್ವಾಮಿಯನ್ನು ತುಳಿಯಲು ಕಾಂಗ್ರೆಸ್ ನಾಯಕರು ಕೇಸ್‌ಗಳ ಮೇಲೆ ಕೇಸ್‌ಗಳನ್ನು ಹಾಕುತ್ತಿದ್ದಾರೆ. ಆದರೆ, ಇಂತಹ ಕುತಂತ್ರಗಳಿಗೆ ಜೆಡಿಎಸ್ ಸೊಪ್ಪು ಹಾಕುವುದಿಲ್ಲ,” ಎಂದು ಸಾರಿದರು.
ಇಂದು ದೇಶದ ಕೇವಲ 3 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಸ್ತಿತ್ವದಲ್ಲಿದೆ. ಪ್ರಧಾನಿ ಮೋದಿ ಬಗ್ಗೆ ಮಾತನಾಡುವ ರಾಹುಲ್ ಗಾಂಧಿಯವರಿಗೆ ಜನರ ನಾಡಿಮಿಡಿತ ಅರ್ಥವಾಗುತ್ತಿಲ್ಲ, ಎಂದು ಕುಟುಕಿದರು. ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣ, “ಹಾಸನ ಜಿಲ್ಲೆಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗುವ ಪ್ರಕ್ರಿಯೆ ಆರಂಭವಾಗಲಿದೆ. ಈ ಜಿಲ್ಲೆಯ ಜನತೆ ದ್ರೋಹಿಗಳಿಗೆ ಮತ್ತು ಕಿರುಕುಳ ನೀಡುವವರಿಗೆ ತಕ್ಕ ಉತ್ತರ ನೀಡಲಿದ್ದಾರೆ,” ಎಂದು ಅಬ್ಬರಿಸಿದರು.


