ಆನೇಕಲ್: ಅತ್ತಿಬೆಲೆಯಲ್ಲಿ ನವವಿವಾಹಿತ ದಂಪತಿಗಳ ನಡುವಿನ ಜಗಳ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪತಿ ಮತ್ತು ಪತ್ನಿ ಪರಸ್ಪರ ಸ್ಫೋಟಕ ಆರೋಪಗಳನ್ನು ಮಾಡಿಕೊಂಡಿದ್ದಾರೆ. ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲೇ ಮನೆಮಂದಿಯ ನಡುವಿನ ವೈಮನಸ್ಸು ಬೀದಿ ರಂಪಾಟವಾಗಿ ಮಾರ್ಪಟ್ಟಿದೆ.
ಅಂಬರೀಶ್ ಮತ್ತು ನಂದಿನಿ ತಿಂಗಳ ಹಿಂದಷ್ಟೇ ಅಂತರ್ಜಾತಿ ವಿವಾಹವಾಗಿದ್ದರು.
ಅಂಬರೀಶ್ ನೀಡಿರುವ ದೂರಿನ ಪ್ರಕಾರ, ಪತ್ನಿ ನಂದಿನಿ ಅವರ ತಂದೆ ಸಂಪಂಗಿ ಮತ್ತು ಕುಟುಂಬಸ್ಥರು ತನ್ನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ.
ಜಗಳದ ವೇಳೆ ತನ್ನ ಬಳಿಯಿದ್ದ ಮೊಬೈಲ್, ಚಿನ್ನದ ಚೈನ್ ಮತ್ತು ಉಂಗುರವನ್ನು ಕಸಿದುಕೊಂಡು, 4 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಅಷ್ಟೇ ಅಲ್ಲದೆ 15 ಸಾವಿರ ನಗದನ್ನು ಕಿತ್ತುಕೊಂಡು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅಂಬರೀಶ್ ಅತ್ತಿಬೆಲೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪತಿಯ ದೂರಿಗೆ ಪ್ರತಿಯಾಗಿ ಪತ್ನಿ ನಂದಿನಿ ನೀಡಿದ್ದು, ಮದುವೆಗೆ ಮೊದಲು ಮತ್ತು ನಂತರವೂ ಪತಿ ಅಂಬರೀಶ್ ಮತ್ತೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಪ್ರತಿ ನಿತ್ಯ ಕುಡಿದು ಬಂದು ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ, ಎಂದು ನಂದಿನಿ ಆರೋಪಿಸಿದ್ದಾರೆ.
ನನ್ನ ಎಂಗೇಜ್ಮೆಂಟ್ ವೇಳೆ ನಾನು ಉಟ್ಟಿದ್ದ ಸೀರೆಯನ್ನು ನನ್ನ ಅತ್ತೆಯೇ ಐರನ್ ಮಾಡಿಕೊಟ್ಟು, ಮಗನ ಮೂಲಕ ಅವನ ಪ್ರೇಯಸಿಗೆ ಗಿಫ್ಟ್ ಕೊಡಿಸಿದ್ದಾರೆ. ಮಗನ ಅನೈತಿಕ ಸಂಬಂಧಕ್ಕೆ ಅತ್ತೆಯೇ ಫುಲ್ ಸಪೋರ್ಟ್ ಮಾಡುತ್ತಿದ್ದಾರೆ, ಎಂದು ದೂರಿದ್ದಾರೆ.ಇನ್ನು ಮದುವೆಗೆ ಮುನ್ನವೇ ತನ್ನ ಜಾತಿ ತಿಳಿದಿದ್ದರೂ, ಈಗ ಪದೇ ಪದೇ ಜಾತಿ ನಿಂದನೆ ಮಾಡಿ ಮನೆಯಿಂದ ಹೊರಹಾಕಲು ಯತ್ನಿಸುತ್ತಿದ್ದಾರೆ ಎಂದು ನಂದಿನಿ ಕಣ್ಣೀರಿಟ್ಟಿದ್ದಾರೆ.
ಒಂದೆಡೆ ಪತಿ ಹಲ್ಲೆಯ ದೂರು ನೀಡಿದ್ದರೆ, ಇನ್ನೊಂದೆಡೆ ಪತ್ನಿ ಅನೈತಿಕ ಸಂಬಂಧ ಮತ್ತು ಜಾತಿ ನಿಂದನೆಯ ಆರೋಪ ಹೊರಿಸಿದ್ದಾರೆ. ಸದ್ಯ ಅತ್ತಿಬೆಲೆ ಪೊಲೀಸರು ಇಬ್ಬರ ದೂರುಗಳನ್ನು ಆಲಿಸಿದ್ದು, ಸತ್ಯಾಸತ್ಯತೆ ತಿಳಿಯಲು ತನಿಖೆ ಮುಂದುವರಿಸಿದ್ದಾರೆ.


