ರಾಯಚೂರು: ಚಿಕ್ಕ ವಿಚಾರಕ್ಕೆ ಶುರುವಾದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಯಚೂರಿನ ಜಹೀರಾಬಾದ್‌ನ ಮಾವಿನ ಕೆರೆ ಬಳಿ ನಡೆದಿದೆ. ಸ್ನೇಹಿತನಿಗೆ ಬೈದಿದ್ದನ್ನು ಪ್ರಶ್ನಿಸಲು ಹೋದ ಯುವಕನನ್ನೇ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬಲಿ ಪಡೆದಿದ್ದಾರೆ.
ಜಹೀರಾಬಾದ್ ನಿವಾಸಿ, ಆಟೋ ಚಾಲಕ ವಿಶಾಲ್ (22) ಕೊಲೆಯಾದ ದುರ್ದೈವಿ. ನಿನ್ನೆ ತಡರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ಆರೋಪಿಗಳಾದ ರಾಜು ಮತ್ತು ಬಸವರಾಜ್ ಎಂಬುವವರು ವಿಶಾಲ್‌ನ ಸ್ನೇಹಿತನಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದರು. ಇದನ್ನು ಪ್ರಶ್ನಿಸಲು ಹೋದ ವಿಶಾಲ್ ಮತ್ತು ಆರೋಪಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಆಕ್ರೋಶಗೊಂಡ ರಾಜು ಮತ್ತು ಬಸವರಾಜ್, ತಮ್ಮ ಬಳಿಯಿದ್ದ ಚಾಕುವಿನಿಂದ ವಿಶಾಲ್ ಮೇಲೆ ಮನಬಂದಂತೆ ದಾಳಿ ನಡೆಸಿದ್ದಾರೆ. ತೀವ್ರ ರಕ್ತಸ್ರಾವಕ್ಕೊಳಗಾದ ವಿಶಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


