ಗದಗ: ಮನೆ ಪಾಯ ಅಗೆಯುವಾಗ ಸಿಕ್ಕ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದ ರಿತ್ತಿ ಕುಟುಂಬಕ್ಕೆ ಜಿಲ್ಲಾಡಳಿತ ಮತ್ತು ಗ್ರಾಮ ಪಂಚಾಯತ್‌ನಿಂದ ಬಂಪರ್ ಉಡುಗೊರೆ ದೊರೆತಿದೆ. ಈ ಕುಟುಂಬದ ನಿಷ್ಕಲ್ಮಶ ಮನಸ್ಸನ್ನು ಮೆಚ್ಚಿದ ಲಕ್ಕುಂಡಿ ಗ್ರಾಮ ಪಂಚಾಯತ್, ಅವರಿಗೆ ಉಚಿತ ನಿವೇಶನ ಸೇರಿದಂತೆ ಹಲವು ಸೌಲಭ್ಯಗಳನ್ನು ಘೋಷಿಸಿದೆ.
ಲಕ್ಕುಂಡಿ ಗ್ರಾಮ ಪಂಚಾಯತ್ ರಿತ್ತಿ ಕುಟುಂಬಕ್ಕೆ ಮಾರುತಿ ನಗರದಲ್ಲಿ 30*40 ವಿಸ್ತೀರ್ಣದ ನಿವೇಶನ ನೀಡಲು ಅಧಿಕೃತವಾಗಿ ನಿರ್ಣಯ ಕೈಗೊಳ್ಳಲಾಗಿದೆ. ಮಾನವೀಯ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಇದನ್ನು ‘ವಿಶೇಷ ಪ್ರಕರಣ’ ಎಂದು ಪರಿಗಣಿಸಲಾಗಿದೆ. ಜನವರಿ 26ರ ಗಣರಾಜ್ಯೋತ್ಸವದಂದು ಜಾಗದ ಹಕ್ಕುಪತ್ರವನ್ನು ಹಸ್ತಾಂತರವಾಗಲಿದೆ.
ಕೇವಲ ನಿವೇಶನ ಮಾತ್ರವಲ್ಲದೆ, ಈ ಕುಟುಂಬದ ಬಾಲಕ ಪ್ರಜ್ವಲ್ ರಿತ್ತಿಯ ಪ್ರಾಮಾಣಿಕತೆ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂಬ ಉದ್ದೇಶದಿಂದ ಲಕ್ಕುಂಡಿಯ ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ಆತನ ಫೋಟೋವನ್ನು ಹಾಕಲು ನಿರ್ಧರಿಸಲಾಗಿದೆ.
ಜನವರಿ 10ರಂದು ಪ್ರಜ್ವಲ್ ರಿತ್ತಿ ಕುಟುಂಬದವರು ಮನೆ ಪಾಯ ಅಗೆಯುವಾಗ ಸುಮಾರು 466 ಗ್ರಾಂ ಚಿನ್ನದ ನಾಣ್ಯ ಹಾಗೂ ಒಡವೆಗಳು ಪತ್ತೆಯಾಗಿದ್ದವು. ಬಡತನದಲ್ಲಿದ್ದರೂ ಆಸೆ ಪಡದ ಈ ಕುಟುಂಬ ತಕ್ಷಣವೇ ಅದನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಿತ್ತು. ಈ ಕುರಿತು ಮಾಧ್ಯಮಗಳು ನಿರಂತರವಾಗಿ ವರದಿ ಮಾಡಿ, ಕುಟುಂಬಕ್ಕೆ ನ್ಯಾಯ ಸಿಗುವಂತೆ ಒತ್ತಾಯಿಸಿದ್ದವು. ನಿಧಿ ಪತ್ತೆಯಾದ ಬೆನ್ನಲ್ಲೇ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆ ಜಂಟಿಯಾಗಿ ಆರು ದಿನಗಳಿಂದ ಉತ್ಖನನ ನಡೆಸುತ್ತಿವೆ. ಭೂಮಿ ಅಗೆದಂತೆಲ್ಲಾ ಹಳೆಯ ಕಾಲದ ಐತಿಹಾಸಿಕ ವಸ್ತುಗಳು ಪತ್ತೆಯಾಗುತ್ತಿದ್ದು, ಇಡೀ ಗ್ರಾಮದಲ್ಲಿ ಕೌತುಕದ ವಾತಾವರಣ ಮನೆಮಾಡಿದೆ.


