ಬೆಂಗಳೂರು: ವಿಧಾನ ಮಂಡಲದ ಜಂಟಿ ಅಧಿವೇಶನವು ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಸರ್ಕಾರ ಸಿದ್ಧಪಡಿಸಿದ ಭಾಷಣದ ಪ್ರತಿಯನ್ನು ಓದಲು ನಿರಾಕರಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇವಲ ಎರಡೇ ಸಾಲಿನಲ್ಲಿ ಮಾತು ಮುಗಿಸಿ ಸದನದಿಂದ ಹೊರನಡೆದರು. ಇದರಿಂದ ಆಕ್ರೋಶಗೊಂಡ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಲ್ಲದೆ, ರಾಜ್ಯಪಾಲರ ನಿರ್ಗಮನಕ್ಕೆ ಅಡ್ಡಿಪಡಿಸಿದ ಪ್ರಸಂಗವೂ ನಡೆಯಿತು.
ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲರು, ಸರ್ಕಾರ ನೀಡಿದ ಸುದೀರ್ಘ ಭಾಷಣದ ಪ್ರತಿಯನ್ನು ಬದಿಗಿರಿಸಿದರು. ಕೇವಲ ಎರಡು ಸಾಲುಗಳಲ್ಲಿ ಶುಭಾಶಯ ಕೋರಿ ಭಾಷಣ ಮುಕ್ತಾಯಗೊಳಿಸಿದರು. ಇದರಿಂದ ಆಘಾತಕ್ಕೊಳಗಾದ ಕಾಂಗ್ರೆಸ್ ನಾಯಕರು ತಕ್ಷಣವೇ ಘೋಷಣೆಗಳನ್ನು ಕೂಗಲು ಆರಂಭಿಸಿದರು.
ರಾಜ್ಯಪಾಲರು ಭಾಷಣ ಮುಗಿಸಿ ವೇದಿಕೆಯಿಂದ ಇಳಿದು ಹೋಗುತ್ತಿದ್ದಂತೆ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮತ್ತು ಇತರ ನಾಯಕರು ಅವರನ್ನು ಅಡ್ಡಗಟ್ಟಲು ಯತ್ನಿಸಿದರು. “ಸರ್ಕಾರ ಕೊಟ್ಟ ಭಾಷಣವನ್ನು ಪೂರ್ಣವಾಗಿ ಓದಬೇಕು” ಎಂದು ಪಟ್ಟು ಹಿಡಿದು ಗದ್ದಲ ಸೃಷ್ಟಿಸಿದರು. ಈ ವೇಳೆ ಮಾರ್ಷಲ್ಗಳು ಮಧ್ಯಪ್ರವೇಶಿಸಿ ಕಾಂಗ್ರೆಸ್ ನಾಯಕರನ್ನು ತಡೆದು, ರಾಜ್ಯಪಾಲರು ಸುರಕ್ಷಿತವಾಗಿ ನಿರ್ಗಮಿಸಲು ದಾರಿ ಮಾಡಿಕೊಟ್ಟರು.


