ಬೆಂಗಳೂರು: ಜಂಟಿ ಅಧಿವೇಶನದಲ್ಲಿ ಸರ್ಕಾರ ಸಿದ್ಧಪಡಿಸಿದ ಭಾಷಣದ ಪ್ರತಿಯನ್ನು ಪೂರ್ಣವಾಗಿ ಓದದೆ ನಿರ್ಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ವರ್ತಿಸುವ ಮೂಲಕ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದಾರೆ” ಎಂದು ಸಿಎಂ ಗುಡುಗಿದ್ದಾರೆ.
ರಾಜ್ಯಪಾಲರು ಸದನದಿಂದ ಹೊರಬಂದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, “ಸಚಿವ ಸಂಪುಟ ಅನುಮೋದಿಸಿದ ಭಾಷಣದ ಪ್ರತಿಯನ್ನೇ ರಾಜ್ಯಪಾಲರು ಓದಬೇಕು ಎಂಬುದು ಸಾಂವಿಧಾನಿಕ ನಿಯಮ. ಆದರೆ ಅವರು ಸ್ವತಃ ತಯಾರು ಮಾಡಿದ್ದ ಒಂದೆರಡು ಸಾಲುಗಳನ್ನು ಓದಿ ಹೊರನಡೆದಿರುವುದು ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ. ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆ” ಎಂದು ವಾಗ್ದಾಳಿ ನಡೆಸಿದರು.
ವಿಶೇಷ ಅಧಿವೇಶನದ ಉದ್ದೇಶವನ್ನು ವಿವರಿಸಿದ ಸಿಎಂ ಸಿದ್ದರಾಮಯ್ಯ, “ಕೇಂದ್ರ ಸರ್ಕಾರವು ಐತಿಹಾಸಿಕ ‘ನರೇಗಾ’ (MGNREGA) ಯೋಜನೆಯನ್ನು ರದ್ದುಪಡಿಸಿ, ಅದರ ಹೆಸರಿನಿಂದ ಮಹಾತ್ಮ ಗಾಂಧೀಜಿಯವರ ಹೆಸರನ್ನು ಕೈಬಿಟ್ಟಿರುವುದು ಅಕ್ಷಮ್ಯ. ಹೊಸದಾಗಿ ತಂದಿರುವ ‘ವಿಬಿಜಿ ರಾಮ್‌ಜೀ ಕಾಯ್ದೆ’ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಮನಮೋಹನ್ ಸಿಂಗ್ ಸರ್ಕಾರ ತಂದಿದ್ದ ‘ಕೆಲಸದ ಹಕ್ಕು’ (Right to Work) ಅನ್ನು ಕೇಂದ್ರ ಸರ್ಕಾರ ಹಳ್ಳ ಹಿಡಿಸುತ್ತಿದೆ” ಎಂದು ಕಿಡಿಕಾರಿದರು.
“ರಾಜ್ಯಪಾಲರ ಈ ನಡೆಯ ವಿರುದ್ಧ ನಮ್ಮ ಸರ್ಕಾರ ಸುಮ್ಮನೆ ಕೂರುವುದಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಸಂಸದರು ಒಗ್ಗಟ್ಟಾಗಿ ಸಾಂವಿಧಾನಿಕ ಬಿಕ್ಕಟ್ಟಿನ ವಿರುದ್ಧ ಕಾನೂನು ಹೋರಾಟ ರೂಪಿಸುತ್ತೇವೆ. ಜನಪ್ರತಿನಿಧಿಗಳ ಸಭೆಯನ್ನು ಕಡೆಗಣಿಸಿದ ರಾಜ್ಯಪಾಲರ ಧೋರಣೆಯನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರುತ್ತೇವೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.


