ನೆಲಮಂಗಲ: ಕಾನೂನು ಬಾಹಿರವಾಗಿ ಮಾರಕಾಯುಧಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ದಾಬಸ್‌ಪೇಟೆಯಲ್ಲಿ ಯುವಕರ ಗುಂಪೊಂದು ತಲ್ವಾರ್ (ಡ್ರ್ಯಾಗನ್) ಮೂಲಕ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ.
ದಾಬಸ್‌ಪೇಟೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಐವರು ಯುವಕರ ಗುಂಪು ಸೇರಿಕೊಂಡು ತಲ್ವಾರ್‌ನಿಂದ ಕೇಕ್ ಕತ್ತರಿಸಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಮಾರಕಾಯುಧ ಹಿಡಿದು ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸಾರ್ವಜನಿಕವಾಗಿ ಮಾರಕಾಯುಧಗಳನ್ನು ಪ್ರದರ್ಶಿಸುವುದು ಕಾನೂನುಬದ್ಧವಾಗಿ ಅಪರಾಧವಾಗಿದ್ದು, ಈ ಹಿನ್ನೆಲೆಯಲ್ಲಿ ತುಮಕೂರು ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ವಿಡಿಯೋದಲ್ಲಿರುವ ಯುವಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಗಡಿಭಾಗದ ದಾಬಸ್‌ಪೇಟೆಯಲ್ಲಿ ನಡೆದಿರುವ ಈ ದುಸ್ಸಾಹಸದ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವ ಸಾಧ್ಯತೆಯಿದೆ. “ಹುಟ್ಟುಹಬ್ಬದ ಹೆಸರಿನಲ್ಲಿ ಸಾರ್ವಜನಿಕ ಶಾಂತಿ ಕದಡುವ ಇಂತಹ ಪುಂಡಾಟಿಕೆಗಳನ್ನು ಸಹಿಸುವುದಿಲ್ಲ” ಎಂದು ಪೊಲೀಸ್ ಮೂಲಗಳು ಎಚ್ಚರಿಕೆ ನೀಡಿವೆ.


