Tuesday, January 27, 2026
18.4 C
Bengaluru
Google search engine
LIVE
ಮನೆದೇಶ/ವಿದೇಶಬಾಹ್ಯಾಕಾಶ ಲೋಕದ 'ಮಹಾಯಾನ'ಕ್ಕೆ ತೆರೆ: ಸುನೀತಾ ವಿಲಿಯಮ್ಸ್ ನಿವೃತ್ತಿ

ಬಾಹ್ಯಾಕಾಶ ಲೋಕದ ‘ಮಹಾಯಾನ’ಕ್ಕೆ ತೆರೆ: ಸುನೀತಾ ವಿಲಿಯಮ್ಸ್ ನಿವೃತ್ತಿ

ನವದೆಹಲಿ: ವಿಶ್ವ ಪ್ರಸಿದ್ಧ ಗಗನಯಾತ್ರಿಗಳಲ್ಲಿ ಒಬ್ಬರಾದ, ಭಾರತೀಯ ಮೂಲದ ಹೆಮ್ಮೆ ಸುನೀತಾ ವಿಲಿಯಮ್ಸ್ ಅವರು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದಿಂದ ನಿವೃತ್ತರಾಗಿದ್ದಾರೆ. 27 ವರ್ಷಗಳ ಕಾಲ ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿದ್ದ ಅವರು, ಡಿಸೆಂಬರ್ 27, 2025 ರಂದು ತಮ್ಮ ಸುದೀರ್ಘ ವೃತ್ತಿಜೀವನಕ್ಕೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ ಎಂದು ನಾಸಾ ಘೋಷಿಸಿದೆ.

ತಮ್ಮ ಕೊನೆಯ ಮಿಷನ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬರೋಬ್ಬರಿ 286 ದಿನಗಳನ್ನು ಕಳೆಯಬೇಕಾಯಿತು. ಕೇವಲ ಒಂದು ವಾರದ ಕೆಲಸಕ್ಕೆಂದು ಹೋಗಿದ್ದ ಇವರು, 9 ತಿಂಗಳ ಕಾಲ ಅಲ್ಲಿಯೇ ಸಿಲುಕಿದ್ದರು. ಇವರ ಸುರಕ್ಷಿತ ಮರಳುವಿಕೆಗಾಗಿ ಇಡೀ ಭಾರತವೇ ಪ್ರಾರ್ಥಿಸಿತ್ತು.

ಮೂಲತಃ ಗುಜರಾತ್‌ನ ಮೆಹಸಾನಾ ಜಿಲ್ಲೆಯ ಜುಲಾಸನ್ ಗ್ರಾಮದ ಹಿನ್ನೆಲೆ ಹೊಂದಿರುವ ಸುನೀತಾ, ಅಮೆರಿಕದಲ್ಲಿ ಜನಿಸಿ ಬೆಳೆದವರು. ತಂದೆ ದೀಪಕ್ ಪಾಂಡ್ಯಾ ಅವರ ಶಿಸ್ತು ಮತ್ತು ಶೈಕ್ಷಣಿಕ ಹಿನ್ನೆಲೆಯಲ್ಲಿ ಬೆಳೆದ ಸುನೀತಾ, ಅಮೆರಿಕದ ನೇವಲ್ ಅಕಾಡೆಮಿ ಮತ್ತು ಫ್ಲೋರಿಡಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಉನ್ನತ ಶಿಕ್ಷಣ ಪಡೆದು ನಾಸಾ ಸೇರಿದ್ದರು. 1998ರಲ್ಲಿ ಗಗನಯಾನಿ ಆಗಿ ನಾಸಾ ಸೇರಿದರು. ಅವರು 2006, 2022 ಮತ್ತು 2024ರಲ್ಲಿ ಮೂರು ಬಾಹ್ಯಾಕಾಶ ಮಿಷನ್‌ಗಳನ್ನು ಪೂರೈಸಿದ್ದು 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.

ನಾಸಾದ ಆಡಳಿತಾಧಿಕಾರಿ ಜಾರೆಡ್ ಐಸಾಕ್‌ಮ್ಯಾನ್ ಅವರು ಸುನೀತಾ ಅವರ ಸೇವೆಯನ್ನು ಕೊಂಡಾಡಿದ್ದು, “ಅವರ ಸಾಧನೆಗಳು ಮುಂದಿನ ಪೀಳಿಗೆಯ ಗಗನಯಾತ್ರಿಗಳಿಗೆ ದಾರಿದೀಪ. ಚಂದ್ರ ಮತ್ತು ಮಂಗಳ ಗ್ರಹದ ಮುಂದಿನ ಯೋಜನೆಗಳಿಗೆ ಸುನೀತಾ ಅವರ ಅನುಭವ ಭದ್ರ ಅಡಿಪಾಯ ಹಾಕಿದೆ,” ಎಂದು ಶ್ಲಾಘಿಸಿದ್ದಾರೆ. ಬಾಹ್ಯಾಕಾಶದ ಅಚ್ಚರಿಗಳನ್ನು ಕಣ್ತುಂಬಿಕೊಂಡು ಭೂಮಿಗೆ ಮರಳಿರುವ ಈ ಧೀರ ವನಿತೆ, ಕೋಟ್ಯಂತರ ಯುವಕ-ಯುವತಿಯರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments