ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ನಿತಿನ್ ನಬಿನ್ ಅವರಿಗೆ ಕೇಂದ್ರ ಸರ್ಕಾರವು ಅತ್ಯುನ್ನತ ದರ್ಜೆಯ ‘Z’ ಶ್ರೇಣಿಯ ವಿಐಪಿ ಭದ್ರತೆಯನ್ನು ಒದಗಿಸಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ವಿಶೇಷ ಭದ್ರತಾ ವಿಭಾಗವು ಇನ್ನು ಮುಂದೆ ನಬಿನ್ ಅವರಿಗೆ ರಕ್ಷಣೆ ನೀಡಲಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ, ನಬಿನ್ ಅವರಿಗೆ ಇರುವ ಅಪಾಯದ ಸಾಧ್ಯತೆಗಳನ್ನು ಮನಗಂಡು ಕೇಂದ್ರ ಗೃಹ ಸಚಿವಾಲಯವು ಈ ಆದೇಶ ಹೊರಡಿಸಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಜೆ.ಪಿ. ನಡ್ಡಾ ಅವರಿಗೂ ಕೇಂದ್ರ ಸರ್ಕಾರ ಇದೇ ಮಾದರಿಯ ಭದ್ರತೆಯನ್ನು ಒದಗಿಸಿತ್ತು.
ಐದು ಬಾರಿ ಬಿಹಾರದ ಶಾಸಕರಾಗಿ ಆಯ್ಕೆಯಾಗಿರುವ ನಿತಿನ್ ನಬಿನ್, ಬಿಜೆಪಿ ಇತಿಹಾಸದಲ್ಲೇ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. “ನಬಿನ್ ಅವರು ಪಕ್ಷದ ಪರಂಪರೆಯನ್ನು ಮುಂದುವರಿಸುವ ಮಿಲೇನಿಯಲ್ ನಾಯಕ. ಅವರು ನನ್ನ ಬಾಸ್, ನಾನು ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತ” ಎಂದು ಪ್ರಧಾನಿ ಮೋದಿ ಅವರು ನಬಿನ್ ಅವರ ನೇಮಕವನ್ನು ಶ್ಲಾಘಿಸಿದ್ದರು.
ಏನಿದು ‘Z’ ಶ್ರೇಣಿ ಭದ್ರತೆ?
ಕೇಂದ್ರ ಸರ್ಕಾರದ ರಕ್ಷಣಾ ಪಟ್ಟಿಯಲ್ಲಿ ಝಡ್-ಪ್ಲಸ್, ಝಡ್, ವೈ-ಪ್ಲಸ್, ವೈ ಮತ್ತು ಎಕ್ಸ್ ಎಂಬ ವಿವಿಧ ವರ್ಗದ ಭದ್ರತೆಗಳಿರುತ್ತವೆ. ‘Z’ ಶ್ರೇಣಿಯಲ್ಲಿ ಸಿಆರ್‌ಪಿಎಫ್‌ನ ಸಶಸ್ತ್ರ ಕಮಾಂಡೋಗಳು ದಿನದ 24 ಗಂಟೆಯೂ ರಕ್ಷಣೆ ನೀಡುತ್ತಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ದೇಶದ ಪ್ರಮುಖ ರಾಜಕೀಯ ಗಣ್ಯರಿಗೆ ಈ ಮಾದರಿಯ ಭದ್ರತೆಯನ್ನು ಒದಗಿಸಲಾಗುತ್ತದೆ.


