ಉಡುಪಿ: ಪ್ರಸಿದ್ದ ಉಡುಪಿ ಶ್ರೀಕೃಷ್ಣ ಮಠಕ್ಕೆ ಬರುವ ಭಕ್ತಾದಿಗಳಿಗೆ ಮಠದ ಆಡಳಿತ ಮಂಡಳಿ ಹೊಸ ವಸ್ತ್ರಸಂಹಿತೆಯನ್ನು ಜಾರಿಗೊಳಿಸಿದೆ. ಮಠದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ಕಡ್ಡಾಯಗೊಳಿಸಿ ಶೀರೂರು ಮಠದ ನೂತನ ಪರ್ಯಾಯ ಸ್ವಾಮಿಗಳು ಆದೇಶ ಹೊರಡಿಸಿದ್ದಾರೆ.
ಪುರುಷರು ಅಂಗಿ, ಬನಿಯನ್, ಬರ್ಮುಡಾ ಹಾಗೂ ಮೈಗೆ ಅಂಟಿಕೊಳ್ಳುವಂತಹ ವಸ್ತ್ರಗಳನ್ನು ಧರಿಸಿ ಮಠ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಮಹಿಳೆಯರು ಶಾರ್ಟ್ಸ್, ಟೈಟ್ ಪ್ಯಾಂಟ್ ಹಾಗೂ ಇತರ ಆಧುನಿಕ ಉಡುಗೆಗಳನ್ನು ಧರಿಸುವಂತಿಲ್ಲ. ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಗೆಯಲ್ಲೇ ಬರಬೇಕೆಂದು ಸೂಚಿಸಲಾಗಿದೆ.
ಈಗಾಗಲೇ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ ಹಾಗೂ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಯಲ್ಲಿದೆ. ಅದೇ ಮಾದರಿಯನ್ನು ಈಗ ಉಡುಪಿ ಶ್ರೀಕೃಷ್ಣ ಮಠದಲ್ಲೂ ಅನುಸರಿಸಲಾಗುತ್ತಿದ್ದು, ಉಡುಪಿ ಶ್ರೀಕೃಷ್ಣ ಮಠದಲ್ಲಿ ವಸ್ತ್ರಸಂಹಿತೆ ಜಾರಿತರಲಾಗಿದೆ.


