ಮಡಿಕೇರಿ: ಕೊಡಗು ಜಿಲ್ಲೆಯ ನಲ್ಲೂರು ಗ್ರಾಮದಲ್ಲಿ ಹುಲಿಯ ಅಟ್ಟಹಾಸ ಮೆರೆದಿದೆ. ಜಾನುವಾರುಗಳನ್ನು ಮೇಯಿಸಲು ಕರೆದೊಯ್ಯುತ್ತಿದ್ದ ರೈತನ ಮೇಲೆ ಹುಲಿ ದಾಳಿ ನಡೆಸಿದ್ದು, ಹಸು ಮೃತಪಟ್ಟಿದೆ. ಅದೃಷ್ಟವಶಾತ್ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮದ ನಿವಾಸಿ ದಾದಾ ಸೋಮಯ್ಯ ಎಂಬುವವರು ತಮ್ಮ ಹಸುಗಳನ್ನು ಗದ್ದೆಗೆ ಮೇಯಿಸಲು ಕರೆದೊಯ್ಯುತ್ತಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಹುಲಿ ಏಕಾಏಕಿ ದಾಳಿ ಮಾಡಿದೆ. ಎದೆಗುಂದದ ಸೋಮಯ್ಯ ಅವರು ಜೋರಾಗಿ ಕಿರುಚುತ್ತಾ, ಕೈಯಲ್ಲಿದ್ದ ದೊಣ್ಣೆಯನ್ನು ಬೀಸಿದ್ದಾರೆ. ಇದರಿಂದ ಬೆದರಿದ ಹುಲಿ ರೈತನನ್ನು ಬಿಟ್ಟು ಹಸುವಿನ ಮೇಲೆರಗಿ ಅದನ್ನು ಕೊಂದಿದೆ.
ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿ ಗಂಗಾಧರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿಯ ಹೆಜ್ಜೆ ಗುರುತುಗಳನ್ನು ಆಧರಿಸಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಹುಲಿ ಸೆರೆಗೆ ಬೋನು ಇರಿಸಲಾಗಿದೆ.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಯ ವಿಫಲತೆಯ ವಿರುದ್ಧ ಕಿಡಿಕಾರಿದ್ದಾರೆ. ಇದೇ ರೈತ ಕಳೆದ ಕೆಲವು ದಿನಗಳ ಹಿಂದೆಯೂ ಹುಲಿ ದಾಳಿಯಲ್ಲಿ ಮತ್ತೊಂದು ಹಸುವನ್ನು ಕಳೆದುಕೊಂಡಿದ್ದರು. ಕ್ಯಾಮೆರಾ ಅಳವಡಿಸಿದರೂ ಹುಲಿ ಸೆರೆಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸ್ಥಳೀಯ ನಿವಾಸಿಗಳು ಕಾಫಿ ತೋಟದ ಕಾರ್ಮಿಕರು ಹಾಗೂ ನಿವಾಸಿಗಳು ತೋಟಕ್ಕೆ ಹೋಗಲು ಭಯಪಡುವಂತಾಗಿದೆ..


