ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೇಗವಾಗಿ ಬಂದ ಖಾಸಗಿ ಕಾಲೇಜು ಬಸ್ ಡಿಕ್ಕಿ ಹೊಡೆದ ಶಾಲೆಗೆ ತೆರಳುತ್ತಿದ್ದ ತಾಯಿ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ವಿವೇಕನಗರ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.
ಆಂಧ್ರಪ್ರದೇಶ ಮೂಲದ ತಾಯಿ ಸಂಗೀತಾ (37), ಮಗ ಪಾರ್ಥ (8) ಮೃತ ದುರ್ದೈವಿಗಳು. ಸಂಗೀತಾ ಮತ್ತು ಅವರ ಮಗ ರಸ್ತೆ ದಾಟುತ್ತಿದ್ದಾಗ, ಅತೀ ವೇಗವಾಗಿ ಬಂದ ಖಾಸಗಿ ಕಾಲೇಜು ಬಸ್ ಇಬ್ಬರಿಗೂ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ತಾಯಿ-ಮಗ ಇಬ್ಬರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಮೃತ ಸಂಗೀತಾ ಅವರು ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ತಾನು ಕೆಲಸ ಮಾಡುತ್ತಿದ್ದ ಅದೇ ಶಾಲೆಗೆ ಮಗನನ್ನು ಸೇರಿಸಿದ್ದ ಅವರು, ಪ್ರತಿದಿನದಂತೆ ಇಂದು ಕೂಡ ಮಗನ ಜೊತೆ ಕೆಲಸಕ್ಕೆ ಹೊರಟಿದ್ದರು. ಆದರೆ, ವಿಧಿ ಆಟವೇ ಬೇರೆಯಾಗಿತ್ತು. ಇತ್ತ ಸಂಗೀತಾ ಅವರ ಪತಿ ಪ್ರಸಾದ್ ಅವರು ಕೂಡ ಚಾಲಕನಾಗಿ ವೃತ್ತಿ ಮಾಡುತ್ತಿದ್ದು, ಅಪಘಾತದ ಸುದ್ದಿ ಕೇಳಿ ಕುಟುಂಬ ಕಂಗಾಲಾಗಿದೆ.
ದುರಂತ ಸಂಭವಿಸುತ್ತಿದ್ದಂತೆ ಬಸ್ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಅಶೋಕನಗರ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪರಾರಿಯಾಗಿರುವ ಚಾಲಕನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.


