ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 12ರ ಕಿರೀಟ ಮುಡಿಗೇರಿಸಿಕೊಂಡ ಮಂಡ್ಯದ ಮಣ್ಣಿನ ಮಗ ಗಿಲ್ಲಿ ನಟರಾಜ್ ಅವರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹಳ್ಳಿಗಾಡಿನ ಪ್ರತಿಭೆಯೊಂದು ರಾಜ್ಯದ ಜನರ ಮನಗೆದ್ದು ಈ ಮಟ್ಟದ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ಅವರು ಬಣ್ಣಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಹೆಚ್‌ಡಿಕೆ, ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಮಳವಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು ಎಂದಿದ್ದಾರೆ.
ಹಳ್ಳಿಯ ರೈತನ ಮಗನಾಗಿ ಹುಟ್ಟಿ ಕನ್ನಡಿಗರೆಲ್ಲರ ಮನಗೆದ್ದಿರುವ ಅವರಿಗೆ ಇನ್ನೂ ಹೆಚ್ಚಿನ ಕೀರ್ತಿ, ಹೆಸರು ಬರಲಿ ಎಂದು ಶುಭಹಾರೈಸುತ್ತೇನೆ. ಹಾಗೆಯೇ, ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕುಮಾರಿ ರಕ್ಷಿತಾ ಶೆಟ್ಟಿ ಅವರಿಗೂ ಅಭಿನಂದನೆ ತಿಳಿಸಿದ್ದಾರೆ.
ಗಿಲ್ಲಿ ಅವರಿಗೆ ಬಿಗ್ ಬಾಸ್ ಸಂಸ್ಥೆಯಿಂದ 50 ಲಕ್ಷ ರೂಪಾಯಿ ನಗದು ಮತ್ತು ಬ್ರ್ಯಾಂಡ್ ನ್ಯೂ ಕಾರು ಲಭಿಸಿದೆ. ಇದರ ಜೊತೆಗೆ, ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಿ ಗೌರವಿಸಿರುವುದು ವಿಶೇಷ.
ಗಿಲ್ಲಿ ನಟರಾಜ್ ವಿಜೇತರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ತಮ್ಮೂರಿನ ಹುಡುಗ ರಾಜ್ಯಮಟ್ಟದ ಶೋನಲ್ಲಿ ಗೆದ್ದು ಬರುತ್ತಿರುವುದನ್ನು ಆಚರಿಸಲು ಅಭಿಮಾನಿಗಳು ಮತ್ತು ಗ್ರಾಮಸ್ಥರು ಬೃಹತ್ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಹೂವಿನ ಹಾರ, ಪಟಾಕಿ ಮತ್ತು ಸಿಹಿ ಹಂಚುವ ಮೂಲಕ ಗ್ರಾಮೀಣ ಪ್ರತಿಭೆಯ ಗೆಲುವನ್ನು ಸಂಭ್ರಮಿಸಲಾಗುತ್ತಿದೆ.


