ಬೆಂಗಳೂರು: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಇಂದು ಮುಕ್ತಾಯಗೊಳ್ಳುತ್ತಿದೆ. ಸುಮಾರು 112 ದಿನಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ಈ ಅದ್ಭುತ ಪಯಣಕ್ಕೆ ಕಿಚ್ಚ ಸುದೀಪ್ ಅವರು ಭಾವುಕವಾಗಿ ವಿದಾಯ ಹೇಳಿದ್ದಾರೆ.
24 ಸ್ಪರ್ಧಿಗಳೊಂದಿಗೆ ಅದ್ದೂರಿಯಾಗಿ ಆರಂಭವಾಗಿದ್ದ ಈ ಸೀಸನ್‌ನಲ್ಲಿ ಅಂತಿಮವಾಗಿ ಗಿಲ್ಲಿ ನಟ, ಕಾವ್ಯಾ ಶೈವ, ಅಶ್ವಿನಿ ಗೌಡ, ಧನುಷ್, ಮ್ಯೂಟೆಂಟ್ ರಘು ಮತ್ತು ರಕ್ಷಿತಾ ಶೆಟ್ಟಿ ಫಿನಾಲೆ ಹಂತ ತಲುಪಿದ್ದಾರೆ. ಇಂದು ರಾತ್ರಿ ಕಿಚ್ಚ ಸುದೀಪ್ ಅವರು ಈ ಸೀಸನ್‌ನ ವಿಜೇತರು ಯಾರು ಎಂಬುದನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.
ಫಿನಾಲೆಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಿಚ್ಚ ಸುದೀಪ್, ಈ ಸೀಸನ್‌ನ ಯಶಸ್ಸಿನ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದು, ಇಂದಿನ ಸೂರ್ಯಾಸ್ತದ ವೇಳೆಗೆ ಬಿಗ್ ಬಾಸ್ ಸೀಸನ್ 12 ಮುಕ್ತಾಯವಾಗಲಿದೆ. ಇದೊಂದು ದೃಶ್ಯ ವೈಭವದ ಅದ್ಭುತ ಪಯಣವಾಗಿದ್ದು, ಪ್ರತಿ ಸೀಸನ್ ಹೇಗೆ ಬೆಳೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಶ್ರದ್ಧೆಯಿಂದ ಕಾರ್ಯಕ್ರಮ ವೀಕ್ಷಿಸಿ ಬೆಂಬಲ ನೀಡಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಎಲ್ಲ ಸ್ಪರ್ಧಿಗಳಿಗೆ ಮತ್ತು ವಿಜೇತರಿಗೆ ನನ್ನ ಅಭಿನಂದನೆಗಳು. ಈ ಅಗಾಧವಾದ ಯಶಸ್ಸಿಗಾಗಿ ತಂತ್ರಜ್ಞರ ತಂಡಕ್ಕೆ ನನ್ನ ಕಡೆಯಿಂದ ದೊಡ್ಡ ಅಭಿನಂಧನೆ. ನೀವೆಲ್ಲ ಇಲ್ಲ ಎಂದರೆ ಬಿಗ್ ಬಾಸ್ ಕಾರ್ಯಕ್ರಮವೇ ಇಲ್ಲ’ ಎಂದಿದ್ದಾರೆ ಕಿಚ್ಚ ಸುದೀಪ್.
ಸುದೀಪ್ ಅವರ ಈ ಪೋಸ್ಟ್ ಹೆಚ್ಚು ಕಮೆಂಟ್‌ಗಳನ್ನು ಪಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ವಾರಾಂತ್ಯದ ಪಂಚಾಯಿತಿಯಲ್ಲಿ ಸ್ಪರ್ಧಿಗಳನ್ನು ಹದ್ದುಬಸ್ತಿನಲ್ಲಿಡುತ್ತಾ, ನಿಷ್ಪಕ್ಷಪಾತವಾಗಿ ನಿರೂಪಣೆ ಮಾಡಿದ ಸುದೀಪ್ ಅವರ ಶೈಲಿಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ.
ಸತತ 12 ಸೀಸನ್‌ಗಳಿಂದ ಯಶಸ್ವಿಯಾಗಿ ನಿರೂಪಣೆ ಜವಾಬ್ದಾರಿ ಹೊತ್ತಿರುವ ಸುದೀಪ್, ಈ ಬಾರಿಯೂ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿದ್ದಾರೆ. ಈಗ ಎಲ್ಲರ ಕಣ್ಣು “ವಿಜೇತರ ಟ್ರೋಫಿ” ಯಾರ ಪಾಲಾಗಲಿದೆ ಎಂಬುದರ ಮೇಲೆ ನೆಟ್ಟಿದೆ.


