ಅಸ್ಸಾಂ: ಕಾಂಗ್ರೆಸ್ ಪಕ್ಷವು ತನ್ನ ಅಸ್ತಿತ್ವ ಮತ್ತು ಜನರ ನಂಬಿಕೆಯನ್ನು ಕಳೆದುಕೊಂಡಿದೆ. ಅಭಿವೃದ್ಧಿಯ ಕಾರ್ಯಸೂಚಿ ಇಲ್ಲದ ಕಾಂಗ್ರೆಸ್‌ನ ನಕಾರಾತ್ಮಕ ರಾಜಕೀಯವನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಅಸ್ಸಾಂನ ಕಲಿಯಾಬೋರ್‌ನಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಪ್ರಧಾನಿಯವರು ಪಾಲ್ಗೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ವನ್ಯಜೀವಿಗಳ ರಕ್ಷಣೆ ಮತ್ತು ಸುಗಮ ಸಂಚಾರಕ್ಕಾಗಿ 6,957 ಕೋಟಿ ರೂ. ವೆಚ್ಚದ ಕಾಜಿರಂಗ ಎಲಿವೇಟೆಡ್ ಕಾರಿಡಾರ್‌ಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಎರಡು ‘ಅಮೃತ್ ಭಾರತ್’ ರೈಲುಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಈ ಭಾಗದ ರೈಲ್ವೆ ಸಂಪರ್ಕಕ್ಕೆ ವೇಗ ನೀಡಿದರು.
ಮಹಾರಾಷ್ಟ್ರ ಮತ್ತು ಬಿಹಾರದ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಮುಂಬೈನಲ್ಲಿ ಕಾಂಗ್ರೆಸ್ ಇಂದು ನಾಲ್ಕು ಅಥವಾ ಐದನೇ ಸ್ಥಾನಕ್ಕೆ ಕುಸಿದಿದೆ. ವರ್ಷಗಳ ಕಾಲ ಆಳ್ವಿಕೆ ನಡೆಸಿದ ಮಹಾರಾಷ್ಟ್ರವನ್ನು ಕಾಂಗ್ರೆಸ್ ಹಾಳುಗೆಡವಿದೆ. ಅಭಿವೃದ್ಧಿಯ ದೂರದೃಷ್ಟಿ ಇಲ್ಲದ ಈ ಪಕ್ಷ ಅಸ್ಸಾಂಗೆ ಅಥವಾ ಕಾಜಿರಂಗಕ್ಕೆ ಎಂದಿಗೂ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ” ಎಂದರು. ಅಲ್ಲದೆ, ಬಿಹಾರದ ಜನರು 20 ವರ್ಷಗಳ ನಂತರವೂ ಬಿಜೆಪಿಗೆ ದಾಖಲೆಯ ಮತ ನೀಡುವ ಮೂಲಕ ಪಕ್ಷದ ಮೇಲಿನ ವಿಶ್ವಾಸವನ್ನು ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.
“ಕಾಜಿರಂಗ ಕೇವಲ ರಾಷ್ಟ್ರೀಯ ಉದ್ಯಾನವನವಲ್ಲ, ಅದು ಅಸ್ಸಾಂನ ಆತ್ಮ ಮತ್ತು ಭಾರತದ ಜೀವವೈವಿಧ್ಯದ ಅಮೂಲ್ಯ ರತ್ನ” ಎಂದು ಬಣ್ಣಿಸಿದ ಮೋದಿ, ಯುನೆಸ್ಕೋ ಮಾನ್ಯತೆ ಪಡೆದ ಈ ತಾಣವನ್ನು ಉಳಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದರು.


