ದಾವಣಗೆರೆ: ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆ ಮುಂದುವರಿದಿದ್ದು, ಸಚಿವ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಈಗಿನ ಅವಧಿಗೆ ನಾನು ಸಿಎಂ ಆಕಾಂಕ್ಷಿಯಲ್ಲ, ಆದರೆ ಮುಂದಿನ 2028ರ ಚುನಾವಣೆಯಲ್ಲಿ ಖಂಡಿತವಾಗಿಯೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಅವರು ಬಹಿರಂಗವಾಗಿ ಘೋಷಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸತೀಶ್ ಜಾರಕಿಹೊಳಿ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಮುಂದಿನ ಸಿಎಂ ಸಾಹುಕಾರ್’ ಎಂಬ ಟೀ-ಶರ್ಟ್ ಧರಿಸಿದ್ದ ಅಭಿಮಾನಿಗಳು ಸಚಿವರ ಎದುರೇ ಘೋಷಣೆಗಳನ್ನು ಕೂಗಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಜನರು ಅಭಿಮಾನದಿಂದ ಘೋಷಣೆ ಕೂಗುವುದು ಸಹಜ. ಆದರೆ ನಾನು ಈ ಅವಧಿಗೆ ಸಿಎಂ ಆಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನಮ್ಮ ಗುರಿ ಏನಿದ್ದರೂ 2028ರ ಚುನಾವಣೆ ಎಂದು ಸ್ಪಷ್ಟಪಡಿಸಿದರು.
ಸಿಎಂ ಮತ್ತು ಡಿಸಿಎಂ ಅವರ ದೆಹಲಿ ಭೇಟಿ ಕುರಿತು ಮಾತನಾಡಿದ ಅವರು, ಆಡಳಿತಾತ್ಮಕ ಹತ್ತಾರು ಕೆಲಸಗಳಿಗಾಗಿ ನಾಯಕರು ದೆಹಲಿಗೆ ಹೋಗುತ್ತಾರೆ. ಸದ್ಯಕ್ಕೆ ಅಸ್ಸಾಂ ಚುನಾವಣೆ ಮತ್ತು ಗ್ರೇಟರ್ ಬೆಂಗಳೂರು ಚುನಾವಣೆಗಳು ಎದುರಿಗಿವೆ. ಹೀಗಾಗಿ ಪದೇ ಪದೇ ಸಿಎಂ ಬದಲಾವಣೆ ಚರ್ಚೆ ಮಾಡುವುದು ಸರಿಯಲ್ಲ. ಏನೇ ಆದರೂ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಹೈಕಮಾಂಡ್ ಎಂದು ತಿಳಿಸಿದರು.
ಮುಂದಿನ ಚುನಾವಣೆಯ ವೇಳೆಗೆ ನಾನು ಸಿಎಂ ಸ್ಥಾನದ ರೇಸ್‌ನಲ್ಲಿ ಇರುತ್ತೇನೆ ಎಂದು ಹೇಳುವ ಮೂಲಕ ಸತೀಶ್ ಜಾರಕಿಹೊಳಿ ಅವರು ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದ ನಾಯಕತ್ವಕ್ಕೆ ತಾವೂ ಸಿದ್ಧರಿದ್ದೇವೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.


