ರಾಮನಗರ: ಇತ್ತೀಚಿಗೆ ಎಲ್ಲವೂ ಆನ್‌ಲೈನ್ ಮಯವಾಗಿ ಬಿಟ್ಟಿದೆ. ಊಟ, ಶಾಪಿಂಗ್ ಹೀಗೆ ಎಲ್ಲವೂ ಆನ್‌ಲೈನ್‌ನಲ್ಲೇ ನಡೆಯುತ್ತದೆ..
ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರೀತಿ ಮತ್ತು ಸಂಬಂಧಗಳು ಕೂಡ ದೂರವನ್ನು ಮೀರಿ ಹತ್ತಿರವಾಗುತ್ತಿವೆ. ಮಾಗಡಿ ಮೂಲದ ಯುವಕ ಹಾಗೂ ಉಡುಪಿ ಮೂಲದ ಯುವತಿ ಆನ್ಲೈನ್‌ನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿರೋದು ಇದಕ್ಕೆ ಸಾಕ್ಷಿಯಾಗಿದೆ. ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಸುಹಾಸ್ ಎಂಬ ಯುವಕ ಮತ್ತು ಉಡುಪಿ ಮೂಲದ ಮೇಘ ಎಂಬ ಯುವತಿ ಈ ಡಿಜಿಟಲ್ ನಿಶ್ಚಿತಾರ್ಥದ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ.
ಸುಹಾಸ್, ಶ್ರೀಧರ್ ಮೂರ್ತಿ ಮತ್ತು ಗೌರಿ ದಂಪತಿಗಳ ಪುತ್ರ. ಚಕ್ರಭಾವಿ ಗ್ರಾಮದ ನಿವಾಸಿಯಾದ ಅವರು ಸದ್ಯ ಕೆನಡಾದಲ್ಲಿ ಉದ್ಯೋಗದಲ್ಲಿದ್ದಾರೆ. ಕೆಲಸದ ಒತ್ತಡ ಹಿನ್ನೆಲೆಯಲ್ಲಿ ರಜೆ ಸಿಗದೇ ಇದ್ದ ಕಾರಣ ದೇಶಕ್ಕೆ ಬರಲು ಸಾಧ್ಯವಾಗದೇ ಹೋಗಿದೆ. ಆದರೆ ಮದುವೆಗೆ ಸಿದ್ಧತೆ ನಡೆಯುತ್ತಿದ್ದು, ನಿಶ್ಚಿತಾರ್ಥವನ್ನು ತಪ್ಪಿಸಲಾಗದ ಕಾರಣ ಆನ್‌ಲೈನ್ ಮೂಲಕ ನೆರವೇರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಈ ನಿಶ್ಚಿತಾರ್ಥ ಸಮಾರಂಭ ಉಡುಪಿಯ ಸರಸ್ವತಿ ಭವನದಲ್ಲಿ ನಡೆಯಿತು. ಇತ್ತ ವಧು ಮೇಘ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಂಪ್ರದಾಯಿಕವಾಗಿ ಸಿದ್ಧರಾಗಿ ಕುಳಿತಿದ್ದರು. ಅತ್ತ ಕೆನಡಾದಲ್ಲಿ ಸುಹಾಸ್ ಅವರು ತಮ್ಮ ಕುಟುಂಬದೊಂದಿಗೆ ವಿಡಿಯೋ ಕಾಲ್‌ಗೆ ಸಂಪರ್ಕಿಸಿದರು. ಸಮಯ ವ್ಯತ್ಯಾಸದ ಕಾರಣ ಅತ್ತ ಮಧ್ಯರಾತ್ರಿ 12 ಗಂಟೆಯಾಗಿದ್ದರೆ, ಇತ್ತ ಭಾರತದಲ್ಲಿ ಮಧ್ಯಾಹ್ನ 12 ಗಂಟೆಯಾಗಿತ್ತು.
ಇಬ್ಬರು ಕುಟುಂಬಗಳು ವಿಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿದ್ದು, ಸುಹಾಸ್ ಮತ್ತು ಮೇಘ ಅವರು ಉಂಗುರಗಳನ್ನು ಒಬ್ಬರಿಗೊಬ್ಬರು ತೋರಿಸುವ ಮೂಲಕ ನಿಶ್ಚಿತಾರ್ಥ ನೆರವೇರಿಸಿದರು. ಸಂಪ್ರದಾಯದಂತೆ ಆಶೀರ್ವಾದ, ಮಂಗಳಾರತಿ ಮತ್ತು ಸಿಹಿ ಹಂಚಿಕೆಯೂ ನಡೆದಿದೆ. ಕೆನಡಾದಲ್ಲಿ ಸುಹಾಸ್ ಅವರ ಕುಟುಂಬ ಸದಸ್ಯರು ಉಂಗುರವನ್ನು ಧರಿಸಿ ಆಚರಣೆ ಮಾಡಿದರೆ, ಉಡುಪಿಯಲ್ಲಿ ಮೇಘ ಅವರ ಕುಟುಂಬವು ಸಂಭ್ರಮಿಸಿತು.
ಮದುವೆ ಮುಂದಿನ ತಿಂಗಳು ಜನವರಿ 7 ಮತ್ತು 8ರಂದು ನಡೆಯಲಿದೆ. ಸುಹಾಸ್ ಅವರು ಆ ಸಮಯಕ್ಕೆ ರಜೆ ಪಡೆದು ದೇಶಕ್ಕೆ ಬರಲಿದ್ದಾರೆ. ಈ ಘಟನೆಯು ತಂತ್ರಜ್ಞಾನದ ಮೂಲಕ ದೂರದ ಸಂಬಂಧಗಳನ್ನು ಬಲಪಡಿಸುವುದಕ್ಕೆ ಉದಾಹರಣೆಯಾಗಿದೆ.


