ಬೆಂಗಳೂರು: ಇಂಡಿಗೋ ಏರ್ಲೈನ್ಸ್ ಸಮಸ್ಯೆಯಿಂದ ವಿಮಾನಗಳು ರದ್ದಾಗುತ್ತಿವೆ.. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ರದ್ದಾದ ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿದೆ.. ಈ ಹಿನ್ನೆಲೆ ಭಾರತೀಯ ರೈಲ್ವೇ ಇಲಾಖೆ ನೆರವಿಗೆ ಬಂದಿದ್ದು, ಅಂತರ್ ರಾಜ್ಯ ಎಕ್ಸ್ಪ್ರೆಸ್ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನ ಜೋಡಿಸಲಾಗಿದೆ..
ಡಿಸೆಂಬರ್ 6, 2025 ರಿಂದ ಜಾರಿಗೆ ಬರುವಂತೆ, ರೈಲ್ವೆ ಹೆಚ್ಚುವರಿ ಬೋಗಿಗಳನ್ನು ಸೇರಿಸಿದೆ. ಹಲವಾರು ಮಾರ್ಗಗಳಲ್ಲಿ ಹೆಚ್ಚುವರಿ ಟ್ರಿಪ್ಗಳನ್ನು ನಡೆಸಲು ನಿರ್ಧರಿಸಿದೆ. ಇದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ದಕ್ಷಿಣ ಭಾರತದಲ್ಲಿ ವಿಮಾನ ರದ್ದತಿಯ ಪರಿಣಾಮ ಹೆಚ್ಚಾಗಿ ಕಂಡುಬಂದಿದ್ದು, ರೈಲ್ವೆ ಸಾಮರ್ಥ್ಯವನ್ನು ಹೆಚ್ಚಿಸಲು ರೈಲ್ವೇ ಇಲಾಖೆ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ.
ದಕ್ಷಿಣ ರೈಲ್ವೆ 18 ರೈಲುಗಳಿಗೆ ಹೊಸ ಬೋಗಿಗಳನ್ನು ಸೇರಿಸಿದೆ. ಹಲವಾರು ಜನಪ್ರಿಯ ಮಾರ್ಗಗಳಲ್ಲಿ ಸ್ಲೀಪರ್ ಮತ್ತು ಚೇರ್ ಕಾರ್ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಪ್ರಯಾಣಿಕರಿಗೆ ಹೆಚ್ಚುವರಿ ಸೀಟುಗಳು ಲಭ್ಯವಾಗುವಂತೆ ಮಾಡಲಾಗಿದೆ. ಇದು ಬೆಂಗಳೂರು, ಚೆನ್ನೈ, ಕೊಯಮತ್ತೂರು ಮತ್ತು ತಿರುವನಂತಪುರಂನಂತಹ ನಗರಗಳಿಗೆ ಪ್ರಯಾಣ ಪುನರಾರಂಭಿಸಲು ಅವಕಾಶ ಮಾಡಿಕೊಟ್ಟಿದೆ.
ಇನ್ನು ದೆಹಲಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಉತ್ತರ ರೈಲ್ವೆ 8 ಮುಖ್ಯ ರೈಲುಗಳಿಗೆ ಹೆಚ್ಚುವರಿ ಎಸಿ ಮತ್ತು ಚೇರ್ ಕಾರ್ಗಳನ್ನು ಸೇರಿಸಿದೆ. ಈ ಬದಲಾವಣೆ ತಕ್ಷಣದಿಂದ ಜಾರಿಗೆ ಬರಲಿದೆ.


