ನವದೆಹಲಿ: ಇಂದಿನ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಿದೆ.. ಸಂಸತ್ ಭವನವು ಡ್ರಾಮಾ ಮಾಡುವ ವೇದಿಕೆ ಅಲ್ಲ. ರಾಷ್ಟ್ರದ ಹಿತಕ್ಕಾಗಿ ಚರ್ಚಿಸುವ ಪವಿತ್ರ ಸ್ಥಳ ಎಂದು ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ..
ಇಂದಿನಿಂದ ಅಧಿವೇಶನ ಆರಂಭವಾಗಿ ಡಿಸೆಂಬರ್ 19 ರಂದು ಕೊನೆಗೊಳ್ಳಲಿದೆ.. 18ನೇ ಲೋಕಸಭೆಯ 6ನೇ ಅಧಿವೇಶನ ಮತ್ತು ರಾಜ್ಯಸಭೆಯ 269ನೇ ಅಧಿವೇಶ ಆರಂಭವಾಗುವುದಕ್ಕೆ ಮುನ್ನ ಸಂಸತ್ ಭವನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳಿಗೆ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನೆನಪಿಸಿದರು.
ಪ್ರಧಾನಿ ಈ ಬಾರಿ ವಿರೋಧ ಪಕ್ಷಗಳನ್ನು ನೇರವಾಗಿ ಗುರಿಯಾಗಿಸಿದ್ದು, ಕೆಲವು ಪಕ್ಷಗಳು ಇನ್ನೂ ತಮ್ಮ ಚುನಾವಣಾ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆ ಸೋಲಿನ ಹತಾಶೆ, ಆ ಆಘಾತ ಸಂಸತ್ತಿನ ವಾತಾವರಣವಾಗಬಾರದು ಎಂದು ತಿಳಿ ಹೇಳಿದರು. ಬಿಹಾರದ ಇತ್ತೀಚಿನ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸಿ, ಜನರ ತೀರ್ಪನ್ನು ಒಪ್ಪಿಕೊಂಡು ಚರ್ಚೆಗೆ ಬರಬೇಕೆಂದು ವಿರೋಧಿಗಳಿಗೆ ಸಲಹೆ ನೀಡಿದರು.
ಈ ದೇಶದ ಜನತೆ ಯಾವಾಗಲೂ ಪ್ರಜಾಪ್ರಭುತ್ವವನ್ನು ಗೆಲ್ಲಿಸುತ್ತಾರೆ. ಈ ಬಾರಿಯೂ ಅದೇ ಆಗಿದೆ ಎಂದು ಬಿಹಾರದ ಫಲಿತಾಂಶದ ಮೂಲಕ ಪ್ರಧಾನಿ ತಮ್ಮ ಮಾತನ್ನು ಸ್ಪಷ್ಟಪಡಿಸಿದರು. ಇದು ಕೇವಲ ಬಿಹಾರದ ಮಾತಲ್ಲ, ಇಡೀ ದೇಶದಲ್ಲಿ ಜನರು ಅಭಿವೃದ್ಧಿ, ಸ್ಥಿರತೆ ಮತ್ತು ಆತ್ಮವಿಶ್ವಾಸಕ್ಕೆ ಮತ ಹಾಕುತ್ತಾರೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಸಾರಿದರು.
ಈ ಚಳಿಗಾಲದ ಅಧಿವೇಶನದಲ್ಲಿ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬರಲಿವೆ. ಎಲ್ಲಾ ಪಕ್ಷಗಳು ರಚನಾತ್ಮಕವಾಗಿ ತೊಡಗಿಸಿಕೊಳ್ಳಬೇಕು ಎಂದು ನಾನು ಆಹ್ವಾನಿಸುತ್ತೇನೆ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಎತ್ತಿ, ದೇಶವನ್ನು ಮುಂದೆ ಕೊಂಡೊಯ್ಯೋಣ ಎಂದು ಪ್ರಧಾನಿ ಹೇಳಿದ್ದಾರೆ..


