ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ಹಾಗೂ ಸಂಪುಟ ಪುನಾರಚನೆ ಬಗ್ಗೆ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ.. ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದಿರುವ ಡಿಸಿಎಂ ಡಿ,ಕೆ ಶಿವಕುಮಾರ್ ಅವರ ಬೆಂಗಳೂರು, ದೆಹಲಿಗೆ ಓಡಾಡುತ್ತಾ ಹೈಕಮಾಂಡ್ ಮನವೊಲಿಸಲು ಪ್ರಯತ್ನ ಮಾಡುತ್ತಿದ್ದಾರೆ..
ಇದೀಗ ಕೆಲವರಿಗೆ ಅಧಿಕಾರ ಮಾತ್ರ ಬೇಕು. ಅದಕ್ಕೆ ನಾವು ಏನು ಮಾಡುವುದು? ಜಗತ್ತಿನಲ್ಲಿ ಎರಡು ಬಗೆಯ ಜನ ಇರುತ್ತಾರೆ. ಒಬ್ಬ ಕೆಲಸ ಮಾಡುವವನು. ಇನ್ನೊಬ್ಬ ಅದರ ಲಾಭ ಪಡೆಯುವವನು. ಆದರೆ ನೀವು ಮೊದಲ ಗುಂಪಿಗೆ ಸೇರಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಭಾರತ್ ಜೋಡೋ ಭವನದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಕೆಶಿ ಮಾತನಾಡಿದರು. ಈ ವೇಳೆ ಇಂದಿರಾ ಗಾಂಧಿ ಹೇಳಿಕೆ ಪ್ರಸ್ತಾಪಿಸಿ ವಿರೋಧಿಗಳಿಗೆ ಮಾತಿನಲ್ಲೇ ತಿವಿದಿದ್ದಾರೆ.
ಕೆಲವರಿಗೆ ಅಧಿಕಾರ ಮಾತ್ರ ಬೇಕು. ಅದಕ್ಕೆ ನಾವು ಏನು ಮಾಡುವುದು? ಕೆಲವರು ಪಕ್ಷದ ಕಚೇರಿಯನ್ನೇ ಮರೆತುಬಿಟ್ಟಿದ್ದಾರೆ. ಪಕ್ಷ ಅಂದ್ರೆ ದೇವಸ್ಥಾನ ಎನ್ನುವುದನ್ನೇ ಕೆಲವರು ಮರೆತಿದ್ದಾರೆ. ಯಾರೂ 100 ಕೆಪಿಸಿಸಿ ಕಟ್ಟಡ ಕಟ್ಟಲು ಆಸಕ್ತಿ ತೋರಿಸುವುದಿಲ್ಲವೋ ಅವರ ಪಟ್ಟಿಯನ್ನು ನಾನು ಹೈಕಮಾಂಡ್‌ಗೆ ನೀಡುತ್ತೇನೆ ಎಂದರು.
ಎಲ್ಲರಿಗೂ ನಾನು ಉತ್ತರ ನೀಡಲು ಹೋಗುವುದಿಲ್ಲ. ಎಲ್ಲದಕ್ಕೂ ದೆಹಲಿಯವರೇ ಉತ್ತರ ಕೊಡ್ತಾರೆ. ಯಾರು ಪಕ್ಷದ ಕೆಲಸಕ್ಕೆ ಆಸಕ್ತಿ ವಹಿಸಲ್ಲ ಅವರಿಗೆ ದೆಹಲಿ ಯವರು ಸೂಕ್ತ ಸಂದರ್ಭದಲ್ಲಿ ಉತ್ತರ ಕೊಡುತ್ತಾರೆ. ನನ್ನ ಕಾಲದಲ್ಲಿ ಏನಾದರೂ ಆಗಬೇಕು. ಇಲ್ಲಿ ಏನಾದರೂ ಬಿಟ್ಟು ಹೋಗಬೇಕು ಅಂತ 100 ಕಚೇರಿ ಮಾಡಲು ಹೊರಟಿದ್ದೇವೆ. ಯಾರು ಆಸಕ್ತಿ ತೋರಿಸುವುದಿಲ್ಲವೋ ಅವರ ಬಗ್ಗೆ ಹೈಕಮಾಂಡ್ ವರದಿ ಕೇಳಿದೆ ಎಂದರು.
ನಾನು ಶಾಶ್ವತವಾಗಿ ರಾಜ್ಯಾಧ್ಯಕ್ಷನಾಗಿ ಇರಲು ಸಾಧ್ಯವಿಲ್ಲ. ಈಗಾಗಲೇ ಐದೂವರೆ ವರ್ಷ ಪೂರ್ಣಗೊಂಡಿದೆ. ಡಿಸಿಎಂ ಆಗಿ ಆಯ್ಕೆಯಾದ ಕೂಡಲೇ ಅಧ್ಯಕ್ಷ ಸ್ಥಾನವನ್ನು ಬಿಡಲು ನಿರ್ಧರಿಸಿದ್ದೆ. ಆದರೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಮುಂದುವರಿಯಿರಿ ಎಂದು ಹೇಳಿದರು. ನಾನು ಅಧಿಕಾರದಲ್ಲಿ ಇರುತ್ತೇನೋ ಇಲ್ವೋ ಅದು ಮುಖ್ಯವಾದ ವಿಷಯ ಅಲ್ಲ. ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು. ಶಾಶ್ವತವಾಗಿ ನಾನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ತ್ಯಾಗದ ಮಾತನ್ನು ಆಡಿದರು.


