ಹೊಸಪೇಟೆ: ರಾಜ್ಯದ ವಿಶ್ವಪ್ರಸಿದ್ದ ಪ್ರವಾಸಿ ತಾಣವಾಗಿರುವ ಹಂಪಿಗೆ ಪ್ರಸಕ್ತ ಸಾಲಿನಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಕುಸಿತಕಂಡು ಬಂದಿದೆ
2024–25ರಲ್ಲಿ ಅಕ್ಟೋಬರ್ ವರೆಗೆ ಕೇವಲ 3,818 ವಿದೇಶಿ ಪ್ರವಾಸಿಗರು ಹಂಪಿಗೆ ಭೇಟಿ ನೀಡಿದ್ದಾರೆ, ಹಿಂದಿನ ವರ್ಷದಲ್ಲಿ ಈ ಸಂಖ್ಯೆ 19,838 ರಷ್ಟಿತ್ತು. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ, ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಕುಸಿತವಾಗಿರುವುದು ಕಂಡು ಬಂದಿದೆ. ಆದರೆ, ಇದೇ ಅವಧಿಯಲ್ಲಿ ದೇಶೀಯ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಇದೇ ಅವಧಿಯಲ್ಲಿ 4,46,441 ಮಂದಿ ಭೇಟಿ ನೀಡಿದ್ದಾರೆ.
ಕೊರೊನಾ ಮಹಾಮಾರಿ ಅಬ್ಬರದ ಬಳಿಕ ಹಂಪಿಗೆ ಭೇಟಿ ನೀಡುವ ದೇಸೀಯ ಪ್ರವಾಸಿಗರ ಸಂಖ್ಯೆ ಸ್ಥಿರವಾಗಿದ್ದರೂ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಳಿತ ಕಂಡುಬಂದಿದೆ. 2022–23ರಲ್ಲಿ 15,340 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದು, 2023–24ರಲ್ಲಿ ಸಂಖ್ಯೆ 20,080ಕ್ಕೆ ಏರಿಕೆಯಾಗಿತ್ತು. ಆದರೆ ಈ ವರ್ಷ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ.
ವಿದೇಶಿ ಪ್ರವಾಸಿಗರ ಸಂಖ್ಯೆ ಕುಸಿತಕ್ಕೆ ಈ ಪ್ರದೇಶದಲ್ಲಿನ ಭದ್ರತೆಯ ಆತಂಕ ಮತ್ತು ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳೇ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿಬಂದಿವೆ. ಕಳೆದ ಬೇಸಿಗೆಯಲ್ಲಿ ವರದಿಯಾಗಿದ್ದ ಲೈಂಗಿಕ ದೌರ್ಜನ್ಯ ಮತ್ತು ವಿದೇಶಿ ಪ್ರವಾಸಿಗನ ಹತ್ಯೆ ಅಂತಾರಾಷ್ಟ್ರೀಯ ಪ್ರವಾಸಿಗರಲ್ಲಿ ಭೀತಿ ಹುಟ್ಟಿಸಿದೆ. ಹಂಪಿ ಬಗ್ಗೆ ವಿಚಾರಣೆ ನಡೆಸುವ ವಿದೇಶಿ ಪ್ರವಾಸಿಗರು ಕೇಳುವ ಮೊದಲ ಪ್ರಶ್ನೆಯೇ ಹಂಪಿ ನಮಗೆ ಸುರಕ್ಷಿತ ಪ್ರದೇಶವಾ? ಎಂಬುದಾಗಿದೆ.
ಇದೇ ವಿಚಾರಕ್ಕೆ ಯೂರೋಪ್ ಮತ್ತು ಪೂರ್ವ ಏಷ್ಯಾದ ಪ್ರವಾಸಿಗರ ಅನೇಕ ಟ್ರಿಪ್ಗಳು ರದ್ದಾಗಿವೆ ಎಂಬುದು ಮಾರ್ಗದರ್ಶಕರು ಮತ್ತು ಪ್ರವಾಸ ಆಯೋಜಕರ ಮಾತು. ಅಲ್ಲದೆ, ಸ್ವಚ್ಛತೆ, ಮಾಹಿತಿ ಕೇಂದ್ರಗಳ ಅಲಭ್ಯತೆ ಮತ್ತು ಸಾರಿಗೆ ಅವ್ಯವಸ್ಥೆಗಳನ್ನೇ ವಿದೇಶಿ ಪ್ರವಾಸಿಗರು ಪ್ರಮುಖವಾಗಿ ಉಲ್ಲೇಖಿಸುತ್ತಾರೆ ಎಂಬುದಾಗಿಯೂ ಅವರು ತಿಳಿಸಿದ್ದಾರೆ.
ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಕಡಿಮೆ ಆಗುತ್ತಿರುವುದು ಸ್ಥಳೀಯ ಪ್ರವಾಸೋದ್ಯಮ ಉದ್ಯಮಿಗಳು ಮತ್ತು ಅವರನ್ನೇ ನಂಬಿ ಜೀವನೋಪಾಯ ನಡೆಸುತ್ತಿರುವವರ ಮೇಲೆ ಪರಿಣಾಮ ಬೀರುತ್ತಿದೆ. ಭದ್ರತೆ ಮತ್ತು ಮೂಲ ಸೌಕರ್ಯಗಳ ಸುಧಾರಣೆ ವಿಚಾರಕ್ಕೆ ಸಂಬಂಧಿಸಿ ಪ್ರಸ್ತಾವನೆಗಳು ಪರಿಶೀಲನೆಯಲ್ಲಿವೆ ಎಂದು ಹಂಪಿ ವಿಶ್ವ ಹೇರಿಟೇಜ್ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಡಿಯಲ್ಲಿ ಇರುವ ವಿಲೇಜಸ್ ವೆಲ್ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ವಿರೂಪಕ್ಷಿ ವಿ. ಹಂಪಿ ತಿಳಿಸಿದ್ದಾರೆ.


