ಉಡುಪಿ: ನವೆಂಬರ್ ಕ್ರಾಂತಿ ಮತ್ತು ಶಾಂತಿ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅಧಿಕಾರ ಬದಲಾವಣೆ ಎಐಸಿಸಿ ಅಧ್ಯಕ್ಷರ ಬಿಟ್ಟ ವಿಚಾರ. ನನ್ನ ಸಹಿತ ಎಲ್ಲರೂ ಪಕ್ಷ ಹೇಳಿದ್ದನ್ನು ಕೇಳುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.. ಉಡುಪಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸೇವೆ ಮಾಡಲು ಗುರುತಿಸಿ ಅವಕಾಶ ಕೊಟ್ಟಿದೆ. ನಿಮ್ಮ ಕೆಲಸ ಬೇರೆ ಇದೆ ಎಂದು ಪಕ್ಷ ಸೂಚಿಸಿದರೆ ಸಂತೋಷದಿಂದ ಕೇಳುತ್ತೇವೆ ಎಂದರು.
ಇನ್ನು ಡಿ.ಕೆ.ಶಿವಕುಮಾರ್ ಅವರು ಮಾತಿನಂತೆ ನಡೆದುಕೊಳ್ಳುವ ವ್ಯಕ್ತಿ. ಸೋನಿಯಾ ಗಾಂಧಿಯವರ ತ್ಯಾಗದ ಮಾತನ್ನು ಬಹಳಷ್ಟು ಸಾರಿ ಹೇಳಿದ್ದಾರೆ. ಇದಕ್ಕೆ ವಿಶೇಷ ಅರ್ಥವನ್ನು ಕಲ್ಪಿಸುವುದು ಬೇಡ. ಗಾಂಧಿ ಪರಿವಾರ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಇತಿಹಾಸದ ಬಗ್ಗೆ ನಮಗೆಲ್ಲ ಗೊತ್ತಿದೆ. ಸೋನಿಯಾ ಗಾಂಧಿ ಅವರ ಬಗ್ಗೆ ಮಾತನಾಡಿದ್ದನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ. ನವೆಂಬರ್ ಕ್ರಾಂತಿ ಅಂದ್ರೆ ಭ್ರಾಂತಿಯೆಂದ ಹೆಚ್.ಸಿ ಮಹಾದೇವಪ್ಪ ಅವರು ನಮ್ಮ ಪಕ್ಷದ ಹಿರಿಯ ಮುಖಂಡರು. ಕ್ಯಾಬಿನೆಟ್‌ನಲ್ಲಿ ಅತ್ಯಂತ ಬುದ್ಧಿವಂತ ಮಂತ್ರಿ. ಅವರೇನೇ ಹೇಳಿದರೂ ಅದಕ್ಕೆ ನಾನು ಬೆಂಬಲಿಸುತ್ತೇನೆ ಎಂದು ತಿಳಿಸಿದರು.
ಇನ್ನು ಇದೇ ವೇಳೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ನಡುವಿನ ವಾಕ್ಸಮರದ ಬಗ್ಗೆ ಮಾತನಾಡಿದ ಅವರು, ಅಕ್ಕನ ಸ್ಥಾನದಲ್ಲಿ ನಿಂತು ಪ್ರತಾಪ್ ಸಿಂಹ ಮತ್ತು ಪ್ರದೀಪ್ ಈಶ್ವರ್‌ಗೆ ಕಿವಿಮಾತು ಹೇಳುತ್ತೇನೆ, ಕೀಳುಮಟ್ಟದ ಭಾಷೆ ಪ್ರಯೋಗಿಸಿ ಜಗಳವಾಡದಂತೆ ಸಲಹೆ ನೀಡಿದ್ದಾರೆ..
ಅಕ್ಕನ ಸ್ಥಾನದಲ್ಲಿ ನಿಂತು ಇಬ್ಬರಿಗೂ ಕಿವಿಮಾತು ಹೇಳುತ್ತೇನೆ. ನನ್ನ ವಿಚಾರದಲ್ಲೂ ಬಹಳಷ್ಟು ಅಪಮಾನಗಳನ್ನು ಅನುಭವಿಸಿದ್ದೇನೆ. ರಾಜಕಾರಣಿಗಳನ್ನು ಜನ ಗಮನಿಸುತ್ತಿದ್ದಾರೆ. ನಾವು ರೋಲ್ ಮಾಡೆಲ್ ಆಗಬೇಕೇ ಹೊರತು ನಾಚಿಕೆ ಆಗುವಂತೆ ವರ್ತಿಸಬಾರದು. ನಿಮ್ಮ ಆಚಾರ-ವಿಚಾರ ಭಾಷೆಯನ್ನು ಜನ ನೋಡ್ತಾರೆ. ನಿಮ್ಮ ತಂದೆ-ತಾಯಿಯನ್ನು ಎಳ್ಕೊಂಡು ಬರುವುದು ಸರಿಯಲ್ಲ, ಇಲ್ಲಿಗೆ ಬಿಟ್ಟುಬಿಡಿ. ಇಬ್ಬರು ಬುದ್ಧಿವಂತರಿದ್ದೀರಿ. ಸಾಕು ಇಲ್ಲಿಗೇ ಬಿಟ್ಟುಬಿಡಿ ಎಂದು ಕಿವಿಮಾತು ಹೇಳಿದರು.


