ಬೆಂಗಳೂರು : ಅಪ್ರಾಪ್ತ ಮಗಳೇ ತನ್ನ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ. ಮೃತ ಮಹಿಳೆ ನೇತ್ರಾವತಿಯ (34) ಅಪ್ರಾಪ್ತ ಮಗಳು, ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತರೇ ಕೊಲೆ ಮಾಡಿರುವುದು ಬಹಿರಂಗವಾಗಿದೆ. ಮೊದಲು ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದ್ದು, ಇದೀಗ ನೇತ್ರಾವತಿಯ ಮಗಳು, ಆಕೆಯ ಪ್ರಿಯಕರ ಮತ್ತು ಆತನ ಮೂವರು ಸ್ನೇಹಿತರು ಸೇರಿ ಒಟ್ಟು ಐವರು ಅಪ್ರಾಪ್ತರು ಕೊಲೆಯಲ್ಲಿ ಶಾಮೀಲಾಗಿರವುದನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಯಲಿಗೆಳೆದಿದ್ದಾರೆ.
ಅ.25 ರಂದು ಘಟನೆ ನಡೆದಿದೆ. ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಸಿಕೊಂಡಿದ್ದರು. ನಂತರ ಮೃತಳ ಅಕ್ಕ ಅನಿತಾಗೆ ಮಗಳ ಮೇಲೆ ಅನುಮಾನ ವ್ಯಕ್ತವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ತಂಗಿ ಸಾವಿನ ಬಳಿಕ ಮಗಳು ಎಲ್ಲೂ ಕಾಣುತ್ತಿಲ್ಲ ಎಂದು ದೂರು ನೀಡಿದ್ದರು. ಎರಡು ದಿನಗಳ ಬಳಿಕ ಮಗಳು ವಾಪಸ್ ಮನೆಗೆ ಬಂದಿದ್ದಳು.
ನೇತ್ರಾವತಿಯ ಮಗಳು ಕೆಲ ಕಾಲದಿಂದ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಕಳೆದ ಶನಿವಾರ ರಾತ್ರಿ ಪ್ರಿಯಕರ ಹಾಗೂ ಅವನ ಮೂವರು ಸ್ನೇಹಿತರೊಂದಿಗೆ ಮನೆಗೆ ಬಂದಿದ್ದಳು. ರಾತ್ರಿ ವೇಳೆ ನೇತ್ರಾವತಿ ಮಲಗಿದ್ದಾಗ ಅವರಿಗೆ ತಿಳಿಯದಂತೆ ಮನೆಗೆ ಬಂದಿದ್ದರು. ಇದರಿಂದ ಅವರ ವರ್ತನೆ ನೋಡಿ ಆಕ್ರೋಶಗೊಂಡು ನೇತ್ರಾವತಿ ಬೈದಿದ್ದಾರೆ. ಈ ವೇಳೆ ಜಗಳ ತೀವ್ರಗೊಂಡಿದ್ದು, ಕೋಪಗೊಂಡ ಮಗಳು ಹಾಗೂ ಆಕೆಯ ಸ್ನೇಹಿತರು ನೇತ್ರಾವತಿಯ ಬಾಯಿ ಮುಚ್ಚಿ ಟವಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.
ಕೊಲೆಯ ನಂತರ, ಆತ್ಮಹತ್ಯೆ ಎಂದು ಬಿಂಬಿಸಲು ಆರೋಪಿಗಳು ನೇತ್ರಾವತಿಯ ಕುತ್ತಿಗೆಗೆ ಸೀರೆ ಕಟ್ಟಿ ಫ್ಯಾನಿಗೆ ನೇತುಹಾಕಿ ಮನೆ ಲಾಕ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಪ್ರಸ್ತುತ ಸುಬ್ರಮಣ್ಯಪುರ ಪೊಲೀಸರು ಐವರನ್ನೂ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.


