ಬೆಂಗಳೂರು: ರಾಜ್ಯದ ಪೊಲೀಸ್ ಸಿಬ್ಬಂದಿ ಧರಿಸುತ್ತಿದ್ದ ಸ್ಲೋಚ್ ಹ್ಯಾಟ್ ಬದಲಿಗೆ ‘ಪಿ-ಕ್ಯಾಪ್’ಗಳನ್ನು ವಿತರಣೆ ಮಾಡಲಾಗುತ್ತಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರು ಹೊಸ ಕ್ಯಾಪ್‌ಗಳನ್ನು ವಿತರಣೆ ಮಾಡಲಿದ್ದಾರೆ. ನಂತರ, ಹಂತಹಂತವಾಗಿ ವಿವಿಧ ಜಿಲ್ಲೆಗಳ ಕಾನ್‌ಸ್ಟೆಬಲ್ ಹಾಗೂ ಹೆಡ್‌ಕಾನ್‌ಸ್ಟೆಬಲ್‌ಗಳಿಗ ಹೊಸ ಕ್ಯಾಪ್ ವಿತರಣೆ ನಡೆಯಲಿದೆ.
ಹಳೆಯ ‘ಸ್ಪೋಚ್ ಕ್ಯಾಪ್’ ಅನ್ನು ದಶಕಗಳಿಂದ ಭಾರತೀಯ ಪೊಲೀಸರು ಧರಿಸುತ್ತಿದ್ದರು. ಆದರೆ, ಕಾಲಕ್ಕೆ ತಕ್ಕಂತೆ ಸಮಗ್ರ ಪೊಲೀಸ್ ವರ್ದಿಯಲ್ಲಿ ಆಧುನಿಕ ಬದಲಾವಣೆ ತರುವ ಅಗತ್ಯವನ್ನು ಸರ್ಕಾರ ಮನಗಂಡಿತು. ಹೊಸ ‘ಪಿ-ಕ್ಯಾಪ್’ ಅದರ ಆಧುನಿಕ ವಿನ್ಯಾಸ, ಹಗುರವಾದ ತೂಕ ಮತ್ತು ಅತ್ಯಾಧುನಿಕ ಕಪ್ಪು ಬಣ್ಣದಿಂದ ಕೂಡಿದೆ. ಇದು ಪೊಲೀಸ್ ಸಿಬ್ಬಂದಿಗಳಿಗೆ ಹೆಚ್ಚು ಆರಾಮದಾಯಕವಾಗಿದ್ದು, ಅವರ ನೋಟಕ್ಕೆ ಹೆಚ್ಚು ಶಿಸ್ತುಬದ್ಧ ಮತ್ತು ಪ್ರಭಾವಶಾಲಿ ರೂಪ ನೀಡುತ್ತದೆ. ತೆಲಂಗಾಣದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿರುವ ಈ ಮಾದರಿಯೇ ಕರ್ನಾಟಕಕ್ಕೂ ಆಯ್ಕೆಯಾಗಿದೆ.
ಜೂನ್‌ನಲ್ಲಿ ನಡೆದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಹೊಸ ಕ್ಯಾಪ್ ವಿತರಣೆಗೆ ನಿರ್ಧರಿಸಲಾಗಿತ್ತು. ಅದಾದ ಮೇಲೆ ತೆಲಂಗಾಣ ಪೊಲೀಸರು ಧರಿಸುತ್ತಿರುವ ತೆಳುವಾದ ‘ಪಿ ಕ್ಯಾಪ್’ ವಿತರಣೆ ಮಾಡಲು ರಾಜ್ಯ ಸರ್ಕಾರವು ಒಪ್ಪಿಗೆ ಸೂಚಿಸಿತ್ತು. ಇದೀಗ ಹೊಸ ಟೋಪಿಗಳು ಸಿದ್ಧಗೊಂಡಿದ್ದು, ಮೊದಲ ಹಂತದಲ್ಲಿ ಪೊಲೀಸರಿಗೆ ‘ಪಿ ಕ್ಯಾಪ್’ ವಿತರಣೆ ನಡೆಯಲಿದೆ.


