ಆನೇಕಲ್: ಚಾಲಕನ ನಿಯಂತ್ರ ತಪ್ಪಿ ಕಂಟೈನರ್ ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಉರಗನದೊಡ್ಡಿ ಬಳಿ ನಡೆದಿದೆ.. ಆಂಧ್ರ ಮೂಲದ ಶ್ರೀಮಾನ್(25) ಮತ್ತು ಜಾರ್ಖಂಡ್ ಮೂಲದ ಶ್ರೀನಿವಾಸ್(28) ಮೃತ ದುರ್ದೈವಿಗಳು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಅವಘಡ ಸಂಭವಿಸಿದೆ. ರಸ್ತೆಯ ಕೇಬಲ್ ಡ್ರಿಲ್ಲಿಂಗ್ ಮಿಷನ್ ತುಂಬಿದ್ದ ಕಂಟೈನರ್ ಇಳಿಜಾರಿನ ತಿರುವಿನಲ್ಲಿ ಅತಿವೇಗವಾಗಿ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಘಟನೆಯ ಪರಿಣಾಮ ಇಬ್ಬರು ಕಾರ್ಮಿಕರು ಕಂಟೈನರ್ ಕೆಳಗೆ ಸಿಲುಕಿ ಮೃತಪಟ್ಟಿದ್ದಾರೆ. ಉಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಗಾಯಾಳುಗಳಿಗೆ ಜಿಗಣಿಯ ವಿಜಯಶ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮೋಹನ್ ಕುಮಾರ್, ಜಿಗಣಿ ಇನ್ಸ್ಪೆಕ್ಟರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಬೆಂಗಳೂರು ಗ್ರಾಮಾಂತರ ಎಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


