ಬೆಳಗಾವಿ: ಹೆಂಡತಿಯನ್ನು ಕೊಲೆ ಮಾಡಿ ಶವವನ್ನು ಮಂಚದ ಕೆಳಗೆ ಅಡಗಿಸಿಟ್ಟು ಪತಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಡೆದಿದೆ..
20 ವರ್ಷದ ಸಾಕ್ಷಿ ಕಂಬಾರ್ ಕೊಲೆಯಾದ ದುರ್ದೈವಿ. ಪತಿ ಆಕಾಶ್ ಕಂಬಾರ್ ಕೊಲೆ ಮಾಡಿ ಪರಾರಿಯಾಗಿದ್ದಾನೆ.. ಕಳೆದ ಮೂರು ದಿನಗಳ ಹಿಂದೆ ಈ ದುರ್ಘಟನೆ ನಡೆದಿದ್ದು, ಆಕಾಶ್ ಕಂಬಾರ್ ತನ್ನ ಪತ್ನಿ ಸಾಕ್ಷಿಯನ್ನು ಕೊಂದು, ಶವವನ್ನು ಮಂಚದೊಳಗೆ ಅಡಗಿಸಿಟ್ಟಿದ್ದಾನೆ. ಬಳಿಕ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಆಕಾಶ್‌ನ ತಾಯಿ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದ್ದು, ಅವರು ಮನೆಗೆ ಮರಳಿದಾಗ ಈ ಕೊಲೆ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಶವವನ್ನು ಕಂಡು ಅತ್ತೆ, ದಿಗ್ಭ್ರಮೆಗೊಂಡಿದ್ದಾರೆ.
ಇನ್ನು ಕೊಲೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ, ಸಾಕ್ಷಿಯ ಪೋಷಕರು ಆಕಾಶ್ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದು ದೂರಿದ್ದಾರೆ. ಈ ಕಿರುಕುಳವೇ ಕೊಲೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಮೂಡಲಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


