ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪತ್ನಿ ಮೇಲೆ ಪಾಪಿ ಪತಿರಾಯ ಮಾರಣಾಂತಿಕ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಿಸದೆ ಇಂದು ಪತ್ನಿ ಸಾವನ್ನಪ್ಪಿರುವ ಘಟನೆ ಪೀಣ್ಯ ಬಳಿಯ ಚೊಕ್ಕಸಂದ್ರದಲ್ಲಿ ನಡೆದಿದೆ.. 26 ವರ್ಷದ ಪ್ರೀತಿ ಮೃತ ಮಹಿಳೆ.. ಆರೋಪಿ ಪತಿ ಛೋಟೆಲಾಲ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ಧಾರೆ..
ಮಧ್ಯಪ್ರದೇಶ ಮೂಲದ ಛೋಟೆಲಾಲ್ ಸಿಂಗ್ ಹಾಗೂ ಪ್ರೀತಿ ಸಿಂಗ್ ಇಬ್ಬರೂ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಸೆಪ್ಟೆಂಬರ್ 24ರಂದು ಮನೆಗೆ ಬಂದ ಛೋಟೆಲಾಲ್ ಹೆಂಡತಿ ಬಳಿ ಕುಡಿಯಲು ನೀರು ಕೇಳಿದ್ದ. ಈ ವೇಳೆ ನಾನು ಕೆಲಸಕ್ಕೆ ಹೋಗಬೇಕು. ಹಾಗಾಗಿ ನೀನೇ ನೀರು ತೆಗೆದುಕೊಂಡು ಕುಡಿ ಎಂದು ಆಕೆ ಹೇಳಿದ್ದಾಳೆ.
ಈಗಾಗಲೇ ಮದ್ಯ ಸೇವಿಸಿ ಬಂದಿದ್ದ ಛೋಟೆಲಾಲ್ ಹೆಂಡತಿಯ ಈ ಮಾತುಗಳನ್ನ ಕೇಳಿ ಸಿಟ್ಟಾಗಿದ್ದು, ಲಟ್ಟಣಿಗೆಯಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದ. ಘಟನೆಯಲ್ಲಿ ತಲೆಗೆ ಗಂಭೀರವಾಗಿ ಪೆಟ್ಟಾದ ಹಿನ್ನಲೆ ಪ್ರೀತಿ ಅಲ್ಲೇ ಕೋಮಾಗೆ ಜಾರಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದರೂ ಅದು ಫಲಿಸದೆ ಆಕೆ ಉಸಿರು ಚೆಲ್ಲಿದ್ದಾಳೆ. ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಛೋಟೆಲಾಲ್ ನನ್ನು ಬಂಧಿಸಿದ್ದಾರೆ.


