ಕೋಲ್ಕತ್ತಾ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಪ್ರಮುಖ ಮಾರ್ಗಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಬರೊಬ್ಬರಿ ಹದಿನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯಾಗಿದ್ದು, ಮಿರಿಕ್ ಮತ್ತು ಸುಖಿಯಾ ಪೋಖಾರಿಯಂತಹ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ. ಪೊಲೀಸರು ಮತ್ತು ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ವಿಪತ್ತಿನ ಪರಿಣಾಮ ಹಿಮಾಲಯನ್ ರಾಜ್ಯ ಸಿಕ್ಕಿಂನ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕುಸಿತದಿಂದಾಗಿ ಬಂಗಾಳ ಮತ್ತು ಸಿಕ್ಕಿಂ ಅನ್ನು ಸಂಪರ್ಕಿಸುವ ರಸ್ತೆ ಮತ್ತು ಡಾರ್ಜಿಲಿಂಗ್ ಮತ್ತು ಸಿಲಿಗುರಿಯನ್ನು ಸಂಪರ್ಕಿಸುವ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ರಸ್ತೆ ತಡೆ ಉಂಟಾಗಿದೆ. ದುರ್ಗಾ ಪೂಜೆಯ ನಂತರ ಕೋಲ್ಕತ್ತಾ ಮತ್ತು ಬಂಗಾಳದ ಇತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಡಾರ್ಜಿಲಿಂಗ್‌ಗೆ ಪ್ರಯಾಣಿಸುತ್ತಾರೆ.
ಈ ವಿಪತ್ತಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು. ಯಾವುದೇ ಅಹಿತಕರ ಘಟನೆಯನ್ನು ತಡೆಗಟ್ಟಲು, ಟೈಗರ್ ಹಿಲ್ ಮತ್ತು ರಾಕ್ ಗಾರ್ಡನ್ ಸೇರಿದಂತೆ ಡಾರ್ಜಿಲಿಂಗ್‌ನ ಪ್ರವಾಸಿ ತಾಣಗಳನ್ನು ಮುಚ್ಚಲು ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತ ನಿರ್ಧರಿಸಿದ್ದು, ಆಟಿಕೆ ರೈಲು ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಈ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಡಾರ್ಜಿಲಿಂಗ್‌ನಲ್ಲಿ ಸಂಭವಿಸಿದ ಜೀವಹಾನಿಯಿಂದ ತೀವ್ರ ನೋವುಂಟಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಭಾರೀ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಡಾರ್ಜಿಲಿಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.


