ಕೊಪ್ಪಳ: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ವಿದ್ಯಾರ್ಥಿ ಯಲ್ಲಾಲಿಂಗ ಸಾವಿನ ಪ್ರಕರಣದ ತೀರ್ಪು ಇಂದು ಜಿಲ್ಲಾ ನ್ಯಾಲಾಯದಲ್ಲಿ ಪ್ರಕಟವಾಗಿದೆ. ಸಚಿವ ಶಿವರಾಜ ತಂಗಡಗಿ ಆಪ್ತ ಹನುಮೇಶ್ ನಾಯಕ್ ಸೇರಿದಂತೆ ಎಲ್ಲಾ 9 ಆರೋಪಿಗಳನ್ನು ಕೇಸ್ನಿಂದ ಖುಲಾಸೆ ಮಾಡಲಾಗಿದೆ.
ತೀರ್ಪಿನ ನಂತರ ಮಾತನಾಡಿದ ಆರೋಪಿಗಳ ಪರ ವಕೀಲ ಗಂಗಾಧರ, ಇದೊಂದು ಆತ್ಮಹತ್ಯೆ ಪ್ರಕರಣ ಎಂದು ತೀರ್ಪು ನೀಡಲಾಗಿದೆ. ನ್ಯಾಯಾಲಯ ನಿರಪರಾಧಿಗಳೆಂದು ಬಿಡುಗಡೆಗೊಳಿಸಿದ್ದಾರೆ. 76 ಸಾಕ್ಷಿಗಳು ಇದರಲ್ಲಿದ್ದವು. ಹಲವು ಸಾಕ್ಷಿಗಳು ನಿರಾಧಾರವಾಗಿದ್ದವು. ಕೇಸನಲ್ಲಿ ಹನುಮೇಶ್ ನಾಯಕ ಹಾಗೂ ಅವರ ಕುಟುಂಬದ ಪಾತ್ರವಿಲ್ಲ. ಯಲ್ಲಾಲಿಂಗ ಕೇಸ್ ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ. ಅವರ ಅಣ್ಣ ವಿರಭದ್ರಪ್ಪ ನೀಡಿದ ಹೇಳಿಕೆಯಿಂದ ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ ಎಂದರು.
ರೈಲ್ವೆ ಪೋಸ್ಟ್ ಮಾರ್ಟ್‌ಂ ವರದಿಯಲ್ಲೂ ರೈಲ್ವೆ ಇಂಜುರಿಯೆಂದು ಬಂದಿದೆ. ಇದೊಂದು ರಾಜಕೀಯ ಷಡ್ಯಂತ್ರ. ಹಾಗಾಗಿ 10 ವರ್ಷ ಇಡೀ ಕುಟುಂಬ ನೋವು ಅನುಭವಿಸಿದೆ. ಡಿಜಿ-ಐಜಿಪಿ ಅವರ ಆದೇಶ ಪತ್ರದಲ್ಲಿ ಪಾತ್ರ ಇಲ್ಲ ಎಂದು ಬಂದಿತ್ತು. ಆದರೂ ಸಿಐಡಿ ತನಿಖೆ ಮಾಡಲಾಗಿತ್ತು. ಇದೊಂದು ದೊಡ್ಡ ರಾಜಕೀಯ ಪಿತೂರಿ. ಮೂರು ವರ್ಷಗಳ ನ್ಯಾಯಾಂಗ ಬಂಧನವಾಗಿತ್ತು. ರಾಜಕೀಯವಾಗಿ ಅವರನ್ನು ಮುಗಿಸಲಾಗಿತ್ತು ಎಂದು ಹನುಮೇಶ ನಾಯಕ ಪರ ವಕೀಲ ಗಂಗಾಧರ ಹೇಳಿದರು. ಖುಲಾಸೆ ನಂತರ ಮಾತನಾಡಿದ ಹನುಮೇಶ ನಾಯಕ, ಇಡೀ ಕುಟುಂಬಕ್ಕೆ ನೋವು ಕೊಟ್ಟದ್ದಾರೆ. ನಾವು ತಪ್ಪು ಮಾಡಿದರೆ ನಾವು ಸರ್ವನಾಶವಾಗಲಿ, ಇಲ್ಲ ಅವರು ಸರ್ವನಾಶವಾಗಲಿ. ಆ ಧರ್ಮಸ್ಥಳ ಮಂಜುನಾಥ ನೋಡಿಕೊಳ್ಳಲಿ ಎಂದರು.
ಏನಿದು ಘಟನೆ:
ಕನಕಗಿರಿ ತಾಲೂಕಿನ ಕನಕಾಪುರ ಗ್ರಾಮದ ನಿವಾಸಿಯಾಗಿದ್ದ ವಿದ್ಯಾರ್ಥಿ ಯಲ್ಲಾಲಿಂಗ, ತಮ್ಮೂರಿನ ಭ್ರಷ್ಟಾಚಾರ ಕುರಿತು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದ. ಬಳಿಕ 2015 ಜನವರಿ 11ರಂದು ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಯಲ್ಲಾಲಿಂಗ ಮೃತದೇಹ ಪತ್ತೆ ಆಗಿತ್ತು. ಮೊದಲಿಗೆ ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು.
ಯಲ್ಲಾಲಿಂಗ ಕೊಲೆಗೆ ಕಾರಣರಾದವರ ಹೆಸರನ್ನು ಡೆತ್ ನೋಟ್ನಲ್ಲಿ ಬರೆದಿದ್ದ, ಆದರೆ ಪೊಲೀಸರು ಈ ವಿಷಯ ಮುಚ್ಚಿ ಹಾಕಿದ್ದರು. ಮೊದಲು ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಕೊಪ್ಪಳ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಯಾವಾಗ ದೂರಿನಲ್ಲಿ ತಂಗಡಗಿ ಆಪ್ತ ಹನುಮೇಶ್ ನಾಯಕ್ ಹೆಸರು ಕೇಳಿಬರುತ್ತೋ, ಅಲ್ಲಿಂದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿತ್ತು.
ಬಳಿಕ ಸಚಿವ ಶಿವರಾಜ ತಂಗಡಗಿ ಆಪ್ತ ಹನುಮೇಶ್ ನಾಯಕ್, ಮಹಾಂತೇಶ್ ನಾಯಕ್, ಮನೋಜ್ ಪಾಟೀಲ್, ಬಾಳನಗೌಡ, ಕಾಡ ಮಂಜ, ಯಮನೂರಪ್ಪ, ದುರ್ಗಪ್ಪ, ನಂದೀಶ್ ಮತ್ತು ಪರಶರಾಮ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಹಿಂದೆ ಇದೇ ಕೇಸ್ನಲ್ಲಿ ಶಿವರಾಜ ತಂಗಡಗಿ ಸಚಿವಸ್ಥಾನ ಕಳೆದುಕೊಂಡಿದ್ದರು. ಇದೀಗ 10 ವರ್ಷ 8 ತಿಂಗಳ ನಂತರ ಸೆಷನ್ಸ್ ಕೋರ್ಟ್ 9 ಆರೋಪಿಗಳನ್ನು ಕೇಸ್ನಿಂದ ಖುಲಾಸೆಗೊಳಿ ತೀರ್ಪು ಪ್ರಕಟಿಸಿದೆ.


