ಬೆಂಗಳೂರು: ನಗರದಲ್ಲಿ ಜಲಮಂಡಳಿ ಹಾಗೂ ಇನ್ನಿತರೆ ಇಲಾಖೆಗಳ ರಸ್ತೆ ಅಗೆತ ಕಾಮಗಾರಿಯನ್ನು ಸ್ಥಗಿತಗೊಳಿಸಲು ಹಾಗೂ ರಸ್ತೆ ಅಗೆತಕ್ಕೆ ಅನುಮತಿ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಸೂಚನೆ ನೀಡಿದ್ದಾರೆ..
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಂಗಳೂರು ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್ ಸೇರಿದಂತೆ ಯಾವುದೇ ಇಲಾಖೆಯಾಗಲಿ ರಸ್ತೆ ಅಗೆಯಲು ಅನುಮತಿ ನೀಡದಂತೆ ಹಾಗೂ ಪ್ರಸ್ತುತ ನಡೆಯುತ್ತಿರುವ ಎಲ್ಲಾ ರಸ್ತೆ ಅಗೆತ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಆಯುಕ್ತರಾದ ರಾಜೇಂದ್ರ ಚೊಳನ್ ರವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಬೆಂಗಳೂರು ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್ ಸೇರಿದಂತೆ ಇನ್ನಿತರೆ ಇಲಾಖೆ ಯವರು ರಸ್ತೆಗಳನ್ನು ಅಗೆದು ಅವರ ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ಅಗೆದಿರುವ ರಸ್ತೆಗಳನ್ನು ದುರಸ್ಥಿ ಕಾರ್ಯ ನಡೆಸಲ್ಲ. ಈ ಹಿನ್ನೆಲೆ ಈಗಾಗಲೇ ಎಲ್ಲಾ ಇಲಾಖೆಗಳು ರಸ್ತೆ ಅಗೆದಿರುವ ಭಾಗವನ್ನು ಸರಿಯಾದ ರೀತಿಯಲ್ಲಿ ಮುಚ್ಚುವವರೆಗೆ ಆ ಇಲಾಖೆಗಳಿಗೆ ಸಂಬಂಧಿಸಿದಂತೆ ಪ್ರಗತಿಯಲ್ಲಿರುವ ಕಾಮಗಾರಿಯನ್ನು ನಿಲ್ಲಿಸುವುದರ ಜೊತೆಗೆ ಹೊಸದಾಗಿ ಯಾವುದೇ ಇಲಾಖೆಗೂ ರಸ್ತೆ ಅಗೆತಕ್ಕೆ ಅನುಮತಿ ನೀಡದಿರಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರ ಪಾಲಿಕೆ ವತಿಯಿಂದ ರಸ್ತೆ ಅಭಿವೃದ್ಧಿಪಡಿಸಿದ ನಂತರ ವಿವಿಧ ಇಲಾಖೆಗಳು ಆಯಾಯ ಇಲಾಖೆಗಳ ಸುಸ್ಥಿತಿಯಲ್ಲಿರುವ ರಸ್ತೆಗಳಲ್ಲಿ ಕಾಮಗಾರಿಗಳನ್ನು ನಡೆಸಿ ಅದನ್ನು ದುರಸ್ತಿಗೊಳಿಸದೆ ಹಾಗೆಯೇ ಬಿಡುತ್ತಾರೆ. ಇದರಿಂದ ಪಾಲಿಕೆಗೆ ಕೆಟ್ಟ ಹೆಸರು ಬರಲಿದೆ. ಅಲ್ಲದೆ ವಾಹನಗಳ ಸಂಚಾರಕ್ಕೂ ಸಮಸ್ಯೆ ಆಗುತ್ತಿದ್ದು, ದುರಸ್ಥಿ ಕಾರ್ಯ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದ್ದರಿಂದ ಎಲ್ಲೆಲ್ಲಿ ಕಾಮಗಾರಿ ನಡೆಸಿರುವ ಸ್ಥಳದ ಲೊಕೇಶನ್ ನ ಫೋಟೋ ಸಮೇತ ಪಟ್ಟಿ ಮಾಡಿ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಸಭೆ ನಡೆಸಿ ದುರಸ್ಥಿ ಕಾರ್ಯ ಕೈಗೊಳ್ಳಲು ಸೂಚನೆ ನೀಡಬೇಕು. ದುರಸ್ಥಿ ಕಾರ್ಯ ಪೂರ್ಣಗೊಂಡ ಬಳಿಕ ಪ್ರಗತಿಯಲ್ಲಿರುವ ಕಾಮಗಾರಿ ಹಾಗೂ ಹೊಸದಾಗಿ ರಸ್ತೆ ಅಗೆಯಲು ಅನುಮತಿ ನೀಡಲು ಸೂಚನೆ ನೀಡಿದರು.
ಎಲ್ಲೆಲ್ಲಿ ದುರಸ್ತಿ ಕಾರ್ಯ
ಸಂಪಿಂಗೆ ರಸ್ತೆ, ಶೇಷಾದ್ರಿ ರಸ್ತೆ, ಶಿವಾನಂದ ವೃತ್ತ, ಹಾಗೂ ಸುತ್ತಮುತ್ತಲಿನ ರಸ್ತೆಗಳು ಸೇರಿದಂತೆ ಸುಮಾರು 6 ಕಿ.ಮೀ ಉದ್ದದ ರಸ್ತೆಗಳಲ್ಲಿ ಪರಿಶೀಲನೆ ನಡೆಸಿದ ಅವರು, ಮೇಲ್ಮೈ ಪದರ ದುರಸ್ತಿ ಹಾಗೂ ರಸ್ತೆ ಗುಂಡಿಗಳನ್ನು ತ್ವರಿತ ಗತಿಯಲ್ಲಿ ಮುಚ್ಚಬೇಕು. ಶಿವಾನಂದ ವೃತ್ತದ ಬಳಿಯಿರುವ ಎಲ್ಲಾ ರಸ್ತೆಗಳಲ್ಲಿ ಮೇಲ್ಮೈ ಪದರ ಸಂಪೂರ್ಣ ಹಾಳಾಗಿದ್ದು, ಕೂಡಲೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚನೆ ನೀಡಿದರು.
ರೈಲ್ವೆ ಸಮಾನಾಂತರ ರಸ್ತೆ ಪಾದಚಾರಿ ಸ್ವಚ್ಛತೆ ಕಾಪಾಡಿ
ಶೇಷಾದ್ರಿಪುರಂನ ಕುಮಾರ ಪಾರ್ಕ್ ರಸ್ತೆಯ ರೈಲ್ವೆ ಸಮಾನನಾಂತರ ರಸ್ತೆಯುದ್ದಕ್ಕೂ ಪಾದಚಾರಿ ಮಾರ್ಗದಲ್ಲಿ ಸ್ವಚ್ಛತೆ ಕಾಪಾಡಲು, ಕೂಡಲೇ ಸ್ವಚ್ಛತಾ ಕಾರ್ಯ ಕೈಗೊಂಡು ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜೊತೆಗೆ ಬೀದಿ ಬದಿ ದೀಪಗಳು ಹಾಳಾಗಿದ್ದರೆ ಅದನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದರು.
ಕ್ರೀಡಾ ಸಂಕೀರ್ಣದಲ್ಲಿ ಆಸನದ ವ್ಯವಸ್ಥೆ
ಗಾಂಧಿನಗರದ ಆರ್. ಗುಂಡೂರಾವ್ ಕ್ರೀಡಾ ಸಂಕೀರ್ಣ ಮೈದಾನದ ಸುತ್ತ ಕುಳಿತುಕೊಳ್ಳಲು ಅಳವಡಿಸಿರುವ ಆಸನಗಳು ಕೆಲವೆಡೆ ಹಾಳಾಗಿದ್ದು, ಅವುಗಳನ್ನು ಕೂಡಲೆ ಬದಲಾಯಿಸಬೇಕು. ಜೊತೆಗೆ ಮೈದಾನವನ್ನು ಸರಿಯಾಗಿ ನಿರ್ವಹಣೆ ಮಾಡಲು ಸೂಚನೆ.
ಪಾಲಿಕೆ ಆಸ್ತಿಗಳನ್ನು ಸಂರಕ್ಷಿಸಿ
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆಯ ಎಷ್ಟು ಆಸ್ತಿಗಳು ಬರಲಿವೆ ಎಂಬುದನ್ನು ಗುರುತಿಸಬೇಕು. ಅನಂತರ ಎಲ್ಲಾ ಆಸ್ತಿಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಸಂರಕ್ಷಣೆ ಮಾಡುವ ಕೆಲಸ ಮಾಡಲು ಸೂಚನೆ ನೀಡಿದರು.
ನೋಡಲ್ ಅಧಿಕಾರಿಗಳ ನಿಯೋಜನೆ
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳು, ಬ್ಲಾಕ್ ಸ್ಪಾಟ್, ವಾಟರ್ ಲಾಗಿಂಗ್ ಪಾಯಿಂಟ್, ವಿದ್ಯುತ್ ದೀಪ, ಪಾದಚಾರಿ ಮಾರ್ಗ ದುರಸ್ತಿ ಮಾಡುವ ಸಲುವಾಗಿ ಎಲ್ಲಾ ರಸ್ತೆಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದ್ದು, ಅದರನುಸಾರ ಈಗಾಗಲೇ ಪಟ್ಟಿ ಕೂಡಾ ಲಭ್ಯವಿದೆ. ಇರುವ ಸಮಸ್ಯೆಗಳನ್ನು ಹಂತ-ಹಂತವಾಗಿ ಪರಿಹರಿಸುವ ಕೆಲಸ ಮಾಡಲಾಗುತ್ತೆ.
ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರ ಜೋತೆ ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಕಾರ್ಯಪಾಲಕ ಅಭಿಯಂತರರು, ಬೆಂ.ಘ.ತ್ಯಾ.ನಿ ನಿಯಮಿತದ ಅಧಿಕಾರಿಗಳು ಸೇರಿದಂತೆ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.


