ಬೆಂಗಳೂರು: ನಿನ್ನೆ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿಯಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ.. ನಗರದ ಹಲವೆಡೆ ಬೃಹತ್ ಮರಗಳು ಧರೆಗುರುಳಿವೆ, ರಸ್ತೆಗಳು ಜಲಾವೃತಗೊಂಡು ವಾಹನ ಸಾವರರು ಪರದಾಡುವಂತಾಗಿದೆ..
ರಾತ್ರಿ ಸುರಿದ ಮಳೆಯಿಂದ ರಾಜಾಜಿನಗರದ 4ನೇ ಬ್ಲಾಕ್ನ ಎರಡು ಮನೆಗಳ ಮೇಲೆ ಬೃಹತ್ ಮರ ಧರೆಗುರುಳಿದೆ. ಚಂದ್ರಮ್ಮ ಮತ್ತು ಪೀಟರ್ ಎಂಬುವರ ಮನೆಗಳ ಮೇಲೆ ಬೃಹತ್ ಮರ ಬಿದ್ದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಈ ಬಗ್ಗೆ ಮಾಹಿತಿ ನೀಡಿದರೂ ಕೂಡ ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಬಾರದೇ ನಿರ್ಲಕ್ಷಿಸಿದ್ದಾರೆ. ವಿದ್ಯತ್ ಕಂಬ ಕೂಡ ಬಾಗಿದ್ದು, ಬೆಸ್ಕಾಂ ಸಿಬ್ಬಂದಿ ಕರೆಂಟ್ ಸಂಪರ್ಕವನ್ನು ಕೂಡ ಕಡಿತಗೊಳಿಸಿಲ್ಲ.
ಮರ ಉರುಳಿದ್ದರಿಂದ 5ನೇ ಮುಖ್ಯ ರಸ್ತೆ ಚಾಮರಾಜಪೇಟೆಯಿಂದ 4ನೇ ಮುಖ್ಯ ರಸ್ತೆಯ ಕಡೆಗೆ ಹೋಗುವ ರಸ್ತೆಯನ್ನು ಬಂದ್ ಮಾಡಲಾಗಿದೆ. ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಸೂಚಿಸಿದ್ದಾರೆ.
ಇನ್ನೂ ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಮಳೆ ಕೊಂಚ ಬಿಡುವು ನೀಡಿತ್ತು. ಇದೀಗ ಮತ್ತೆ ಮಳೆ ಚುರುಕಾಗಿದ್ದು, 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಮಂಡ್ಯ, ಮೈಸೂರು, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.