ಬೆಂಗಳೂರು: ಒಡಿಶಾದ ಶುಭಂ ಸಬರ್ ಎಂಬಾತ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ದುಡಿದು ನೀಟ್ ಪರೀಕ್ಷೆ ಪಾಸ್ ಮಾಡಿ ಬೆರ್ಹಾಂಪುರ್ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದ ಸಾಧಕರಾಗಿದ್ದಾರೆ.
ರಾಜಧಾನಿ ಬೆಂಗಳೂರು ಹಲವು ಮಂದಿಗೆ ಊಟ, ಉದ್ಯೋಗ ನೀಡುವ ಸ್ಥಳವಾಗಿದೆ. ಇದೀಗ ಒಡಿಶಾದಿಂದ ಬೆಂಗಳೂರಿಗೆ ಬಂದು ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವಕನೋರ್ವ ಎನ್ಇಇಟಿ ಪರೀಕ್ಷೆ ತೇರ್ಗಡೆ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಒಡಿಶಾದ ಕುಂದ್ರಾ ಜಿಲ್ಲೆಯ ಮುದುಳಿದಯ್ಯ ಗ್ರಾಮದ ಸಣ್ಣ ರೈತನ ಮಗನಾಗಿರುವ ಶುಭಂ ಸಬರ್ ಈ ಸಾಧನೆ ಮಾಡಿದ ಯುವಕನಾಗಿದ್ದು, ಗ್ರಾಮದಿಂದ ಫೋನ್ ಮಾಡಿ ಕುಟುಂಬಸ್ಥರು ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಅಂದಹಾಗೇ, ಶುಭಂ ಅವರ ತಂದೆಗೆ ನಾಲ್ಕು ಜನ ಮಕ್ಕಳಿದ್ದು, ನಾಲ್ವರಲ್ಲಿ ಮೊದಲ ಮಗನೇ ಈ ಶುಭಂ. ಸದ್ಯ ಶುಭಂಗೆ ಒಡಿಶಾದ ಬೆರ್ಹಾಂಪುರ್‌ನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರವೇಶ ಸಿಕ್ಕಿದೆ. ಜೂನ್ 14ರಂದು ಬೆಂಗಳೂರಿನ ಕಟ್ಟಡದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಶುಭಂಗೆ ಎನ್ಇಇಟಿ ಪಾಸ್ ಆದ ಬಗ್ಗೆ ಫೋನ್ ಮೂಲಕ ಮಾಹಿತಿ ಲಭ್ಯವಾಗಿತ್ತು. ಈ ಕರೆ ಮಾಡಿದವರು ಶುಭಂ ಅವರ ಶಿಕ್ಷಕರು, ಕರೆ ಮಾಡಿದವರು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ-ಯುಜಿ (ನೀಟ್) ಪಾಸ್ ಮಾಡಿದ್ದಾಗಿ ತಿಳಿಸಿದ್ದರು.