ಬೆಂಗಳೂರು: ಫೇಸ್‌ಬುಕ್‌ನವರ ಸ್ವಯಂ ಅನುವಾದದಿಂದ ಆದ ತಪ್ಪನ್ನು ಕೆಲವರು ಸ್ಕ್ರೀನ್ ಶಾಟ್ ತೆಗೆದುಕೊಂಡು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇಂತಹ ಕಿಡಿಗೇಡಿ ತನ ಮಾಡುವುದರಲ್ಲಿ ವಿಪಕ್ಷದ ಕೆಲವು ಶಾಸಕರು, ಮಾಜಿ ಸಚಿವರು ಸೇರಿರುವುದು ಅತ್ಯಂತ ದುಃಖಕರ. ಯಾರು ಈ ಸುದ್ದಿ ಬಗ್ಗೆ ಗೊಂದಲಕ್ಕೆ ಒಳಗಾಗಬಾರದು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಜುಲೈ 15ರಂದು ಮೃತರಾದ ಬಿ. ಸರೋಜಾದೇವಿ ಅವರಿಗೆ ಅವರ ಮನೆಗೆ ತೆರಳಿ ನನ್ನ ಶ್ರದ್ಧಾಂಜಲಿ ಸಲ್ಲಿಸಿದ್ದೆ. ಈ ಸುದ್ದಿಯನ್ನು ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಫೇಸ್‌ಬುಕ್ ಖಾತೆ ಇಂದ ಕನ್ನಡ ಭಾಷೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಆದ್ರೆ ಕೆಲವು ಫೇಸ್‌ಬುಕ್ ಬಳಕೆದಾರರ ವಾಲ್‌ನಲ್ಲಿ ನನ್ನ ಕನ್ನಡದ ಪೋಸ್ಟ್ ನ ಇಂಗ್ಲಿಷ್ ಭಾಷಾಂತರ ಕಾಣಿಸಿಕೊಂಡಿದೆ.
Chief Minister Siddaramaiah passed away ಎಂದು ಮೆಟಾದಿಂದ ತಪ್ಪು ಅನುವಾದವಾಗಿತ್ತು. ಅಪಾರ್ಥ ಕಲ್ಪಿಸುವ, ಗಂಭೀರವಾದ ದೋಷದಿಂದ ಕೂಡಿದ ಈ ಪೋಸ್ಟ್ ಓದಿದ ಅನೇಕ ಮಂದಿ ಸಿಎಂ ಕಚೇರಿಯಿಂದಲೇ ಇಂಗ್ಲೀಷ್ನಲ್ಲಿ ಪೋಸ್ಟ್ ಹಾಕಿರಬಹುದೆಂದು ತಿಳಿದು ಟೀಕೆ-ಟಿಪ್ಪಣಿ ಮಾಡಿರುವುದನ್ನು ನಾನು ಗಮನಿಸಿದ್ದೇನೆ. ಈ ಕಾರಣಕ್ಕಾಗಿ ಸ್ಪಷ್ಟೀಕರಣವನ್ನು ನೀಡಬೇಕಾಗಿ ಬಂದಿದೆ.
ಫೇಸ್‌ಬುಕ್‌ನಲ್ಲಿ ಸ್ವಯಂ ಅನುವಾದ ಎಂಬ ಆಯ್ಕೆಯಿರುವುದೇ ಈ ಅವಾಂತರಕ್ಕೆ ಕಾರಣವಾಗಿದೆ. ಇದನ್ನು ರದ್ದು ಮಾಡುವ ಅವಕಾಶ ಪೋಸ್ಟ್ ಮಾಡುವ ಖಾತೆದಾರನಿಗೆ ಇರುವುದಿಲ್ಲ. ಇದರಿಂದಾಗಿ ಜಗತ್ತಿನ ಯಾವುದೇ ಭಾಷಿಕರು ಇದನ್ನು ತಮ್ಮ ಭಾಷೆಗೆ ಭಾಷಾಂತರಿಸಿಕೊಂಡು ಓದಬಹುದಾಗಿದೆ. ಈ ಸ್ವಯಂ ಅನುವಾದದ ಪ್ರಕ್ರಿಯೆಯೇ ದೋಷಪೂರಿತವಾಗಿದೆ.
ನಮ್ಮ ಕಚೇರಿ ಕನ್ನಡದಲ್ಲಿ ಮಾಡಿದ್ದ ಮೂಲ ಪೋಸ್ಟ್ ಕೆಲವರ ಮೊಬೈಲ್ಗಳಲ್ಲಿ ಇಂಗ್ಲಿಷ್‌ಗೆ ಭಾಷಾಂತರಗೊಂಡು ಕಾಣಿಸಿಕೊಂಡಿದೆ. ಈ ಭಾಷಾಂತರವೇ ದೋಷಪೂರ್ಣವಾಗಿದೆ. ಅಪಾರ್ಥ ಕಲ್ಪಿಸುವ ಇಂಗ್ಲೀಷ್ ಪೋಸ್ಟ್ ನೋಡಿದ ಕೆಲವರು ಕೂಡಲೇ ಅದರ ಕೆಳಭಾಗದಲ್ಲಿರುವ ಮೂಲ ಬರಹವನ್ನು ನೋಡಿ ಎಂಬ ಆಯ್ಕೆಯ ಮೂಲಕ ಮೂಲ ಕನ್ನಡ ಪೋಸ್ಟ್ ನೋಡಿ ಸರಿಯಾದ ಸುದ್ದಿಯನ್ನು ಗ್ರಹಿಸಿ ಕೊಂಡಿದ್ದು ಮಾತ್ರವಲ್ಲ, ಫೇಸ್‌ಬುಕ್‌ನ ಸ್ವಯಂ ಭಾಷಾಂತರದಲ್ಲಿ ಕಂಡುಬಂದಿರುವ ದೋಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರ ನಮ್ಮ ಗಮನಕ್ಕೆ ಬಂದ ಕೂಡಲೇ ನನ್ನ ಮಾಧ್ಯಮ ಸಲಹೆಗಾರರು ಮೆಟಾದವರನ್ನು ಸಂಪರ್ಕಿಸಿ ದೋಷವನ್ನು ಸರಿಪಡಿಸುವಂತೆ ಮನವಿ ಮಾಡಿದ್ದರು. ಮೆಟಾದವರು ತಮ್ಮ ತಪ್ಪಿಗೆ ಕ್ಷಮೆ ಕೇಳಿ, ದೋಷವನ್ನು ಸರಿಪಡಿಸುವುದಾಗಿ ಇ-ಮೈಲ್ ಮೂಲಕ ತಿಳಿಸಿದ್ದಾರೆ.
ಫೇಸ್‌ಬುಕ್‌ನವರ ಸ್ವಯಂ ಅನುವಾದದಿಂದ ಆಗಿರುವ ತಪ್ಪನ್ನು ಕೆಲವರು ಸ್ಕ್ರೀನ್‌ಶಾಟ್ ತೆಗೆದುಕೊಂಡು ಹಂಚಿಕೊಳ್ಳುವ ಮೂಲಕ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇಂತಹ ಕಿಡಿಗೇಡಿತನ ಮಾಡುವವರಲ್ಲಿ ವಿರೋಧಪಕ್ಷದ ಕೆಲವು ಶಾಸಕರು, ಮಾಜಿ ಸಚಿವರು ಕೂಡಾ ಸೇರಿರುವುದು ವಿಷಾದನೀಯ. ಹಾಗಾಗಿ ಯಾರೂ ಈ ಸುಳ್ಳು ಸುದ್ದಿಯ ಬಗ್ಗೆ ಗೊಂದಲಕ್ಕೆ ಒಳಗಾಗಬಾರದೆಂದು ಮನವಿ ಮಾಡಿದ್ದಾರೆ.


