ಬೆಂಗಳೂರು: ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿರುವ ಬಹುಭಾಷಾ ಹಿರಿಯ ನಟಿ ಸರೋಜಾ ದೇವಿ ಅವರು ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಂಗಳೂರಿನ ಮಲ್ಲೇಶ್ವರಂ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
7 ಜನವರಿ 1938ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬೈರಪ್ಪ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು ಮತ್ತು ತಾಯಿ ರುದ್ರಮ್ಮ ಗೃಹಿಣಿಯಾಗಿದ್ದರು. ಬೈರಪ್ಪ ಮಗಳಿಗೆ ನೃತ್ಯ ಕಲಿಯಲು ಪ್ರೋತ್ಸಾಹ ನೀಡಿದ್ದು, ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಪ್ರೋತ್ಸಾಹಿಸಿದರು.
ಸರೋಜಾದೇವಿ ಅವರು ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ 5ಕ್ಕೂ ಹೆಚ್ಚು ಭಾಷೆಗಳಲ್ಲಿ ನಟಿಸಿದ್ದು, 200ಕ್ಕೂ ಅಧಿಕ ಸಿನಿಮಾಗಳಲ್ಲಿ ಪಾತ್ರ ಮಾಡಿದ್ದಾರೆ. ಅಭಿನಯ ಸರಸ್ವತಿ ಎಂದು ಖ್ಯಾತಿ ಪಡೆದಿರುವ ಅವರು 6 ದಶಕಗಳ ಕಾಲ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟನೆ ಮಾಡಿದ್ದಾರೆ.
ಕನ್ನಡದ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಚಿತ್ರ ರಂಗಕ್ಕೆ ಸರೋಜಾ ದೇವಿ ಎಂಟ್ರಿ ಕೊಟ್ಟಿದ್ದಾರೆ. ರಾಜ್ ಕುಮಾರ್ ಸೇರಿ ಗಣ್ಯ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಕಿತ್ತೂರು ಚೆನ್ನಮ್ಮ, ಮಲ್ಲಮ್ಮನ ಪವಾಡ, ನ್ಯಾಯವೇ ದೇವರು, ಶ್ರೀನಿವಾಸ ಕಲ್ಯಾಣ, ಬಭ್ರುವಾಹನ, ಭ್ಯಾಗ್ಯವಂತರು ಸಿನಿಮಾದಲ್ಲಿ ಅಣ್ಣಾವ್ರ ಜೊತೆಗೆ ನಟನೆ ಮಾಡಿದ್ದಾರೆ. ತೆಲುಗು, ತಮಿಳು ಇತರೆ ಭಾಷೆಗಳಲ್ಲೂ ನಟನೆ ಮಾಡಿದ್ದಾರೆ.
ಚಿತ್ರರಂಗದ ಅಪಾರ ಸೇವೆಗೆ ಹತ್ತಾರು ಪ್ರಶಸ್ತಿಗಳು ಸಂದಿದೆ. 1969ರಲ್ಲಿ ಪದ್ಮಶ್ರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1992ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1965ರಲ್ಲಿ ಕರ್ನಾಟಕದಿಂದ ಅಭಿಯನ ಸರಸ್ವತಿ ಗೌರವ ಸಿಕ್ಕಿದೆ. 2009ರಲ್ಲಿ ತಮಿಳುನಾಡು ಸರ್ಕಾರದಿಂದ ಕಲೈಮಾಣಿಕ ಜೀವಮಾನ ಸಾಧನೆ ಪ್ರಶಸ್ತಿ, 2009ರಲ್ಲಿ ಕರ್ನಾಟಕ ಸರ್ಕಾರದಿಂದ ಡಾ. ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇನ್ನು ಸರೋಜಾ ದೇವಿ ನಿಧನಕ್ಕೆ ಸಿನಿಮಾ ರಂಗ, ರಾಜಕೀಯ ನಾಯಕರು ಸೇರಿ ಗಣ್ಯ ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು ‘ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಕನ್ನಡ ಚಿತ್ರರಂಗವು ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿಯ ಸುಮಾರು 200 ಚಿತ್ರಗಳಲ್ಲಿ ನಟಿಸಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದರು. ಸದಭಿರುಚಿಯ ಚಿತ್ರಗಳ ಮೂಲಕ ಹಲವು ದಶಕಗಳ ಕಾಲ ಸಿನಿಪ್ರಿಯರನ್ನು ರಂಜಿಸಿದ್ದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ. ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುವೆ ಎಂದಿದ್ದಾರೆ.


