ಹುಬ್ಬಳ್ಳಿ: ಪೊಲೀಸ್ ಇಲಾಖೆ ಅಂದ್ರೆ ಅದು ಶಿಸ್ತಿನ ಇಲಾಖೆ. ಹೀಗಾಗಿ ಪೊಲೀಸರಿಗೆ ಶಿಸ್ತು ಮುಖ್ಯ ಅದರಲ್ಲೂ ದೈಹಿಕ ಸಾಮರ್ಥ್ಯ ಮುಖ್ಯವಾಗಿರುತ್ತದೆ. ಹೀಗಾಗಿ ಪೊಲೀಸ್ ಸೆಲೆಕ್ಷನ್ ಸಂದರ್ಭದಲ್ಲಿ ಸಾಕಷ್ಟು ದೈಹಿಕ ಪರೀಕ್ಷೆ ನಡೆಸಿದ ಬಳಿಕ ಇಲಾಖೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಆದ್ರೆ ಇಲಾಖೆಗೆ ಸೇರಿದ ನಂತರ ಕೆಲಸದ ಒತ್ತಡ ಹಾಗೂ ಇನ್ನಿತರ ಕಾರಣಗಳಿಂದ ದೈಹಿಕ ಸಾಮರ್ಥ್ಯದ ಬಗ್ಗೆ ತಲೆಕೆಡಿಸಿಕೊಳ್ಳದ ಹಿನ್ನೆಲೆ ಬೊಜ್ಜು ಬಂದು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಟೋಲ್ ಆಗುತ್ತಾರೆ.
ಹೀಗಾಗಿ ಹು-ಧಾ ಪೊಲೀಸ್ ಕಮಿಷನರ ಎನ್.ಶಶಿಕುಮಾರ್ ದಪ್ಪಗಾದ ಸಿಬ್ಬಂದಿಗಳಿಗೆ ತೂಕ ಕಡಿಮೆ ಮಾಡುವ ಸಲುವಾಗಿ ಹೊಸ ಪ್ರಯೋಗ ಮಾಡಲು ಮುಂದಾಗಿದ್ದರೆ. ಹುಬ್ಬಳ್ಳಿಯ ಗೋಕುಲ ರಸ್ತೆಯ ಸಿಆರ್ ಮೈದಾನದಲ್ಲಿ ದೈಹಿಕ ಸಾಮರ್ಥ್ಯದ ತರಬೇತಿ ಶಿಬಿರ ಹಮ್ಮಿಕೊಂಡಿದ್ದಾರೆ. ತರಬೇತಿ ಶಿಬಿರಕ್ಕೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದ್ದಾರೆ.
ಪರಿವೀಕ್ಷಣೆ ಬಳಿಕ ಮಾತನಾಡಿದ ಕಮಿಷನರ್ ಶಶಿಕುಮಾರ್ ಕೆಲಸದ ಒತ್ತಡದ ನಡುವೆ ದೈಹಿಕ ಸಾಮರ್ಥ್ಯದ ಬಗ್ಗೆ ಗಮನಹರಿಸದ ಕಾರಣ ವಿಪರೀತ ದೇಹ ತೂಕವನ್ನು ಹೊಂದಿದವರಿಗಾಗಿ ಒಂದು ತಿಂಗಳ ಕಾಲ ಫಿಟ್ನೆಸ್ ತರಬೇತಿ ನೀಡಲಾಗಿದೆ. ಈಗಾಗಲೇ ಹಲವು ಮಂದಿ ತಮ್ಮ ತೂಕವನ್ನು 10 ಕೆಜಿಯಷ್ಟು ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದ್ರು.
ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪೊಲೀಸರು ಆರೋಗ್ಯದ ಹಿತದ್ರಷ್ಟಿ ಹಾಗೂ ಸಿಬ್ಬಂದಿಯ ಶಿಸ್ತಿನ ವಿಚಾರಕ್ಕೆ ಸಂಬಂಧಿಸಿದಂತೆ ಇಂತಹ ಶಿಬಿರವನ್ನು ಆಯೋಜನೆ ಮಾಡಿರುವ ಕಮಿಷನರ್ ಶಶಿಕುಮಾರ್ ಕಾರ್ಯಕ್ಕೆ ಪೊಲೀಸ್ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


