Tuesday, April 29, 2025
30.4 C
Bengaluru
LIVE
ಮನೆSports35 ಎಸೆತಗಳಲ್ಲಿ ಐಪಿಎಲ್ ಸೆಂಚುರಿ..? ಅದೂ 14ನೇ ವಯಸ್ಸಲ್ಲಿ..? ಅದ್ಭುತ ಹುಡುಗ..!

35 ಎಸೆತಗಳಲ್ಲಿ ಐಪಿಎಲ್ ಸೆಂಚುರಿ..? ಅದೂ 14ನೇ ವಯಸ್ಸಲ್ಲಿ..? ಅದ್ಭುತ ಹುಡುಗ..!

ಅಬ್ಬಾ.. ಅದೇನು ಧೈರ್ಯ.. ಅದೇನು ವೈಭವ..? ಅದೇನು ಆಟ.. ಈತ ಬರೀ ಪೋರನಲ್ಲ.. ಪ್ರಚಂಡ ಪೋರ..

ಐಪಿಎಲ್ ಹುಟ್ಟಿದಾಗ ವೈಭವ್ ಸೂರ್ಯವಂಶಿ ಹುಟ್ಟಿಯೇ ಇರಲಿಲ್ಲ.. ಐಪಿಎಲ್ ಶುರುವಾಗಿ 3 ವರ್ಷಗಳ ನಂತರ ಹುಟ್ಟಿದವನು ಇವತ್ತು ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.

14ನೇ ವಯಸ್ಸಿನಲ್ಲಿ ರಶೀದ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾರಂತಹ ವರ್ಲ್ಡ್ ಕ್ಲಾಸ್ ಬೌಲರ್’ಗಳ ಮುಂದೆ ಎದೆಯುಬ್ಬಿಸಿ ನಿಂತು ಶತಕ ಬಾರಿಸುವುದೆಂದರೆ..? ಅದೂ 35 ಎಸೆತಗಳಲ್ಲಿ..! ನಂಬಲಸಾಧ್ಯ..

ಇಶಾಂತ್ ಶರ್ಮಾನ ಒಂದೇ ಓವರ್’ನಲ್ಲಿ 3 ಸಿಕ್ಸರ್ಸ್, 28 ರನ್. 18 ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ರಿಕಿ ಪಾಂಟಿಂಗ್’ನನ್ನು ಇಶಾಂತ್ ಶರ್ಮಾ ಬೆಚ್ಚಿ ಬೀಳಿಸಿದ್ದ. ಆಗ ಈ ಸೂರ್ಯವಂಶಿ ಹುಟ್ಟಿರಲಿಲ್ಲ. ಈಗ ಅದೇ ಇಶಾಂತ್’ಗೆ ಈ ಹುಡುಗ ಆ ಪರಿ ಚಚ್ಚುತ್ತಾನೆ ಎಂದರೆ ಇವನು fearless. This kid is so special.

ಗುಜರಾತ್ ವಿರುದ್ಧ ವೈಭವ್ ಸೂರ್ಯವಂಶಿ ಪವರ್ ಪ್ಲೇನಲ್ಲೇ ಬಾರಿಸಿದ್ದು ಆರು ಸಿಕ್ಸರ್’ಗಳು. ನೆನಪಿರಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಡೀ ಟೂರ್ನಿಯಲ್ಲಿ ಪವರ್ ಪ್ಲೇನಲ್ಲಿ ಬಾರಿಸಿದ ಸಿಕ್ಸರ್’ಗಳ ಸಂಖ್ಯೆ ಐದು..!

ಬೆನ್ನ ಹಿಂದೆ 12 ಎಂದು ಬರೆಸಿಕೊಂಡಿದ್ದಾನೆ. ಅದು ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಬಳಸುತ್ತಿದ್ದ ಜರ್ಸಿ ನಂಬರ್.

ವೈಭವ್ ಸೂರ್ಯವಂಶಿ ಬಿಹಾರದ ಸಮಷ್ಠಿಪುರದವನು. ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಜೀವನಕ್ಕೆ ಆಧಾರವಾಗಿದ್ದ ತುಂಡು ಜಮೀನನ್ನು ಮಾರಿದ್ದರು ತಂದೆ ಸಂಜೀವ್ ಸೂರ್ಯವಂಶಿ. ಇವತ್ತು ಆ ತಂದೆ ಮಗನ ಆಟವನ್ನು ನೋಡಿ ಹೆಮ್ಮೆ ಪಡುತ್ತಿರಬಹುದು..!

‘’ಹೀಗೊಬ್ಬ ಹುಡುಗನಿದ್ದಾನೆ, ನೋಡು’’ ಎಂದು ಸೂರ್ಯವಂಶಿ ಬಗ್ಗೆ ರಾಜಸ್ಥಾನ ರಾಯಲ್ಸ್ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಹೇಳಿದವರು ವಿವಿಎಸ್ ಲಕ್ಷ್ಮಣ್. ಅಂಡರ್-19 one-day Challenger tournamentನಲ್ಲಿ ಆಡುತ್ತಿದ್ದಾಗ ದಿಗ್ಗಜ ಲಕ್ಷ್ಮಣ್ ಅವರ ಗಮನವನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆದಿದ್ದ ಈ ವೈಭವ್ ಸೂರ್ಯವಂಶಿ. ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ 58 ಎಸೆತಗಳಲ್ಲಿ ಅಂಡರ್-19 ಶತಕ ಬಾರಿಸಿದಾಗ ವೈಭವ್ ವಯಸ್ಸು ಜಸ್ಟ್ 13.

ಸೂರ್ಯವಂಶಿಯನ್ನು ರಾಯಲ್ಸ್ ಶಿಬಿರಕ್ಕೆ ಕರೆಸುತ್ತಾರೆ ದ್ರಾವಿಡ್. ಅವನ ಪ್ರವೇಶ ಹೇಗಿತ್ತು ಎಂದರೆ, ಎದುರಿಸಿದ ಮೊದಲ ಎಸೆತವನ್ನೇ ಕ್ರೀಡಾಂಗಣದಿಂದ ಹೊರಗೆ ಅಟ್ಟಿ ಬಿಡುತ್ತಾನೆ. ದ್ರಾವಿಡ್’ರಂಥಾ ದ್ರಾವಿಡ್ ಒಂದು ಕ್ಷಣ ದಂಗಾಗಿ ಹೋಗುತ್ತಾರೆ. ಇವತ್ತು ಸೂರ್ಯವಂಶಿ ವೈಭವಕ್ಕೆ ಕ್ರಿಕೆಟ್ ಜಗತ್ತೇ ದಂಗಾಗಿ ಹೋಗಿದೆ.

14ನೇ ವಯಸ್ಸಿಗೆ ಐಪಿಎಲ್ ಶತಕ. ಟಿ20 ಕ್ರಿಕೆಟ್’ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯನೆಂಬ ವಿಶ್ವದಾಖಲೆ.

Remember the name ವೈಭವ್ ಸೂರ್ಯವಂಶಿ.

-ಸುದರ್ಶನ್

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments