ರಾಯಚೂರು : ತಾಲೂಕು ಅರಸಿಗೇರಾ ಬಳಿ ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ರಸ್ತೆಯಿಂದ ತೆಗ್ಗುಗುಂಡಿಗೆ ಇಳಿದಿದ್ದು ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಾಯಚೂರು- ವಡ್ಡಪಲ್ಲಿ ಮಾರ್ಗದ ಸಾರಿಗೆ ಬಸ್ ಅಪಘಾತಕ್ಕೆ ಒಳಗಾಗಿದ್ದು 45 ಜನ ಪ್ರಯಾಣಿಕರಲ್ಲಿ ಐದಾರು ಪ್ರಯಾಣಿಕರಿಗೆ ಗಾಯಗಳಾಗಿವೆ. ಬಸ್‌ನ ಬ್ರೇಕ್ ಫೇಲ್ ಆಗಿದ್ದು ಚಾಲಕನ ನಿಯಂತ್ರಣಕ್ಕೆ ಬಾರದೆ ರಸ್ತೆ ಪಕ್ಕದ ಗುಂಡಿಗೆ ಇಳಿದಿದೆ. ಹಳೆಯದಾದ ಬಸ್‌ಗಳನ್ನ ಗ್ರಾಮೀಣ ಭಾಗಕ್ಕೆ ಓಡಾಡಿಸಲಾಗುತ್ತಿದ್ದು, ಇಂತಹ ಘಟನೆಗಳು ಮರುಕಳಿಸುತ್ತಿವೆ. ರಸ್ತೆಪಕ್ಕದಲ್ಲಿ ಆಳವಾದ ಗುಂಡಿ ಇದ್ದಿದ್ದರೆ ಬಸ್ ಪಲ್ಟಿ ಹೊಡೆದು ಭಾರೀ ಅನಾಹುತವೇ ಆಗುತ್ತಿತ್ತು ಅಂತ ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಪ್ರಯಾಣಿಕರನ್ನ ಬೇರೊಂದು ಬಸ್‌ನಲ್ಲಿ ರಾಯಚೂರಿಗೆ ಕಳುಹಿಸಲಾಗಿದೆ.