ಧಾರವಾಡ: ಬುದ್ಧಿ ಹೇಳಿದ ಸೋದರ ಮಾವನಿಗೆ ಆತನ ಅಳಿಯನೇ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಪಡಿಸಿದ್ದಾನೆ.
ಧಾರವಾಡದ ಅಂಜನೇಯ ನಗರದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಘಟನೆಯಿಂದ ಕುಟುಂಬಸ್ಥರು ಸೇರಿ ನಗರದ ಜನತೆ ಬೆಚ್ಚಿಬಿದಿದ್ದಾರೆ. ಸದ್ಯ ಚಾಕು ಇರಿತಕ್ಕೆ ಒಳಗಾದ ಮಾವನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಧಾರವಾಡದ ಆಂಜನೇಯ ನಗರದ 35 ವರ್ಷದ ಅಶೋಕ ಬಂಡಿವಡ್ಡರ ಎಂಬಾತ ಗಾಯಾಳುವಾಗಿದ್ದು, ಈತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 14 ವರ್ಷದ ಅಳಿಯನಾದ ಈಶ್ವರ್ ಎಂಬಾತನಿಗೆ ಹೊಡೆದು ಬುದ್ದಿ ಹೇಳಿದ್ದ. ಇದಕ್ಕೆ ಸಿಟ್ಟಿಗೆದ್ದ ಈಶ್ವರ್, ಮಾವ ಫೋನಿನಲ್ಲಿ ಮಾತನಾಡುತ್ತಿದ್ದಾಗ ಹೊಂಚು ಹಾಕಿ ಹಿಂಬದಿಯಿಂದ ಬಂದು ಬೆನ್ನಿಗೆ ಚಾಕು ಇರಿದಿದ್ದಾನೆ. ಇದರಿಂದ ಅಶೋಕ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅಶೋಕನನ್ನು ಸ್ಥಳೀಯರ ಸಹಾಯದಿಂದ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರ ಹೆಚ್ಚಿನ ಚಿಕಿತ್ಸೆಗೆಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಉಪನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


