ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ಪಂಚ ಗ್ಯಾರಂಟಿಗಳ ಖರ್ಚಿನ ನಿಖರ ಮೊತ್ತವೇ ಸರಕಾರಕ್ಕೆ ಗೊತ್ತಿಲ್ಲದಂತಾಗಿದೆ ಎಂದು ಎಎಪಿ ನಾಯಕ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಸಿದ್ದರಾಮಯ್ಯ ತಮ್ಮ ಎರಡನೇ ಅವಧಿಯ ಪ್ರಥಮ ಬಜೆಟ್ ನಲ್ಲಿ ಗ್ಯಾರಂಟಿಗಳಿಗಾಗಿ 17000 ಕೋಟಿ ಎಂದು ಅಂದಾಜು ಮಾಡಿದ್ದರು. ಆದರೆ ಅದು 28,000 ಕೋಟಿ ರೂಪಾಯಿಗಳಿಗೆ ತಲುಪಿತು. ಕಳೆದ ಬಜೆಟ್ ನಲ್ಲಿಯೂ ಸಹ ಗ್ಯಾರೆಂಟಿಗಳಿಗಾಗಿ ಮೀಸಲಿಟ್ಟಿದ್ದ ಹಣಕ್ಕೂ ಖರ್ಚು ಮಾಡಿದ ಹಣಕ್ಕೂ 47% ನಷ್ಟು ಹೆಚ್ಚಾಯಿತು. ಅಂದರೆ ಈ ಸರ್ಕಾರಕ್ಕೆ ತಾವು ನೀಡುತ್ತಿರುವ ಗ್ಯಾರಂಟಿಗಳಿಗೆ ಎಷ್ಟು ಖರ್ಚಾಗುತ್ತದೆ ಎಂಬ ಪ್ರಾಥಮಿಕ ಅಧ್ಯಯನವೇ ಇಲ್ಲದಂತಹ ಕೇವಲ ವೋಟ್ ಬ್ಯಾಂಕ್ ಗಾಗಿ ಮಾತ್ರ ಘೋಷಿಸಿರುವಂತಹ ಯೋಜನೆ ಎಂಬುದು ಖಂಡಿತ ಸಾಬೀತಾಗುತ್ತಿದೆ. ಇದರಿಂದಾಗಿ ಬಜೆಟ್ ಮೀಸಲಿಟ್ಟಿರುವ ಮೊತ್ತಕ್ಕೂ ಖರ್ಚಾಗುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಾಗಿ ಸರ್ಕಾರವು ಆರ್ಥಿಕ ಹೊರೆಯಿಂದಾಗಿ ತತ್ತರಿಸುತ್ತಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಸರ್ಕಾರದ ವಿರುದ್ದ ಟೀಕಿಸಿದ್ದಾರೆ.
ರಾಜ್ಯದ ಬೃಹತ್ ಹಾಗೂ ಮಧ್ಯಮ ನೀರಾವರಿ ಇಲಾಖೆಗೆ 22 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಟ್ಟಿದ್ದಾರೆ. ಆದರೆ ಈ ಇಲಾಖೆಯಲ್ಲಿ ಈಗಾಗಲೇ 31,000 ಕೋಟಿ ರೂಗಳನ್ನು ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ವರ್ಷವೂ ಸಹ ಯಾವುದೇ ನಯಾ ಪೈಸೆ ನೀರಾವರಿ ಯೋಜನೆಗಳು ಆಗುವುದಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. ಇದೊಂದು ಬೋಗಸ್ ಬಜೆಟ್ ಎಂದು ಟೀಕೆ ಮಾಡಿದ್ದಾರೆ.


