- ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ..!
- ಕುಖ್ಯಾತ ಹಂತಕ ಬಾಗಪ್ಪ ಹರಿಜನ ಹತ್ಯೆ..
- ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು..
ಭೀಮಾ ತೀರದ ಕುಖ್ಯಾತ ಹಂತಕ ಬಾಗಪ್ಪ ಹರಿಜನ್(50) ಹತ್ಯೆ ಮಾಡಲಾಗಿದೆ. ಮಂಗಳವಾರ ರಾತ್ರಿ 8-50 ರ ಸುಮಾರಿನಲ್ಲಿ ವಿಜಯಪುರದ ಮದಿನಾ ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಆ ಮೂಲಕ ಭೀಮಾ ತೀರದಲ್ಲಿ ಮತ್ತೆ ರಕ್ತದದೋಕಳಿ ಆಗಿದೆ. ಹಲವಾರು ಜನರ ಜೀವ ತೆಗೆದ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಾಗಪ್ಪನ ರಕ್ತ ಚರಿತ್ರೆಯ ಕತೆ ರೋಚಕ ಅಂತ್ಯವಾಗಿದೆ. ಇನ್ನು ಘಟನಾ ಸ್ಥಳಕ್ಕೆ ವಿಜಯಪುರ ಎಸ್ ಪಿ ಲಕ್ಷಣ ನಿಂಬರಗಿ ಭೇಟಿ ನೀಡಿದ್ದು ಕೊಲೆಗಾರರ ಪತ್ತೆಗೆ ಬಲೆ ಬೀಸಿದ್ದಾರೆ.
ಬಾಗಪ್ಪ ಹರಿಜನ ಯಾರು..?

ಬಾಗಪ್ಪ ಮೂಲತಃ ಆಲಮೇಲ ತಾಲೂಕಿನ ಬ್ಯಾಡಗಿಹಾಳ ಗ್ರಾಮದ ನಿವಾಸಿ ಆಗಿದ್ದ. ಭೀಮಾತೀರದ ಹಂತಕ ಚಂದಪ್ಪ ಹರಿಜನ ಸಹಚರನಾಗಿ ಗುರುತಿಸಿಕೊಂಡಿದ್ದ ಬಾಗಪ್ಪನ ವಿರುದ್ದ ಕೊಲೆ ಪ್ರಕರಣ, ಕೊಲೆಗೆ ಯತ್ನ, ಸುಲಿಗೆ, ದರೋಡೆ, ಗುಂಡು ಹಾರಿಸಿದ ಪ್ರಕರಣ, ಬೆದರಿಕೆ ಸೇರಿದಂತೆ 10 ಕ್ಕೂ ಹೆಚ್ಚು ಪ್ರಕರಣಗಳು ಬಾಗಪ್ಪ ವಿರುದ್ದ ವಿಜಯಪುರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದವು.
ಬಾಗಪ್ಪನ ಮೇಲಿರುವ ಪ್ರಕರಣಗಳ್ಯಾವವು..?
1997ರಲ್ಲಿ ಚಡಚಣ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಜೀವ ತೆಗೆದ ಕೇಸ್ ನಲ್ಲಿ ಬಾಗಪ್ಪ ಆರೋಪಿಯಾಗಿದ್ದ.
1998ರಲ್ಲಿ ಆಳಂದ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಕೊಲೆಗಳ ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿತ್ತು. 1999ರಲ್ಲಿ ಆಲಮೇಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಒಂದರಲ್ಲೂ ಬಾಗಪ್ಪನ ಹೆಸರು ಕೇಳಿಬಂದಿತ್ತು. 2000ರಲ್ಲಿ ಪೊಲೀಸರ ಮೇಲೆ ಫೈರಿಂಗ್, ಬ್ಯಾಡಗಿಹಾಳದಲ್ಲಿ ನಡೆದ ಕೊಲೆ, ಆಳಂದ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ಬಸವಕಲ್ಯಾಣ ಠಾಣೆ ವ್ಯಾಪ್ತಿಯಲ್ಲಿ ಕೊಲೆಗೆ ಯತ್ನಿಸಿದ ಆರೋಪ ಕೇಳಿ ಬಂದಿದ್ದವು.
2001ರಲ್ಲಿ ಆಲಮೇಲ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ಸಾಕ್ಷಿಗಳ ಮೇಲೆ ಗುಂಡು ಹಾರಿಸಿದ್ದ ಆರೋಪ ಬಾಗಪ್ಪ ಹರಿಜನ್ ಮೇಲಿದೆ. 2003ರಲ್ಲಿ ಅಪ್ಜಲಪುರ ತಾಲೂಕಿನ ಶಿರೋಳದಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. 2017ರಲ್ಲಿ ಈತನ ಮೇಲೆ ಗುಂಡಿನ ದಾಳಿಯಾಗಿತ್ತು. 2017, ಆಗಸ್ಟ್ 8ರಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುಂಡಿನ ದಾಳಿಯಾಗಿತ್ತು. ದಾಳಿ ವೇಳೆ ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದ. 2000ರಲ್ಲಿ ಚಂದಪ್ಪ ಹರಿಜನ್ನನ್ನು ಪೊಲೀಸರು ಎನ್ಕೌಂಟರ್ ಮಾಡುತ್ತಾರೆ.
ಅದಾದ 14 ವರ್ಷಗಳ ನಂತರ ಚಂದಪ್ಪನ ತಮ್ಮ ಬಸವರಾಜ ಹರಿಜನ್ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಬಾಗಪ್ಪ ಭಾಗಿಯಾಗಿದ್ದ ಎನ್ನಲಾಗಿದೆ. 2020 ಜುಲೈ 19ರಂದು ಇಂಡಿಯ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ ಮೂರು ಕೇಜಿ ಚಿನ್ನ ಅಥವಾ 5 ಕೋಟಿ ಹಣ ನೀಡುವಂತೆ ಬೇಡಿಕೆಯಿಟ್ಟು ಬೆದರಿಕೆ ಹಾಕಿದ್ದ ಆರೋಪವೂ ಇದೆ.