ಕೊಪ್ಪಳ : ಕೊಪ್ಪಳ ಗವಿಮಠದ ಜಾತ್ರೆಯನ್ನು ದಕ್ಷಿಣ ಭಾರತದ ಕುಂಭಮೇಳ ಎಂದು ಕರೆಯುತ್ತಾರೆ. ಬುಧವಾರ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ರಥೋತ್ಸವದೊಂದಿಗೆ ಆರಂಭವಾಗಲಿದೆ. ಮುಂದಿನ 15 ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಜಾತ್ರೆ ಅಂಗವಾಗಿ ಮೂರು ದಿನಗಳ ಕಾಲ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕೊಪ್ಪಳ ಜಾತ್ರೆ ಭಾವೈಕ್ಯತೆ ಸಂಕೇತ
ಗವಿಮಠದ ಜಾತ್ರೆಯ ವಿಶೇಷತೆ ಎಂದರೆ ಈ ಜಾತ್ರೆಯನ್ನು ಭಕ್ತರ ನಡೆಸುತ್ತಾರೆ. ಮಹಾದಾಸೋಹಕ್ಕೆ ಬೇಕಾದ ಎಲ್ಲವನ್ನು ಭಕ್ತರು ಪೂರೈಸುತ್ತಾರೆ. ಜಾತಿ, ಧರ್ಮವನ್ನು ಮೀರಿ ಎಲ್ಲರೂ ಒಂದಾಗಿ ಜಾತ್ರೆ ನಡೆಸುವುದು ಗವಿಮಠ ಜಾತ್ರೆಯ ವಿಶೇಷತೆ.
ಇನ್ನು ಕಲ್ಮಶ, ದ್ವೇಷ, ಧರ್ಮ, ಜಾತಿಯ ಮದ, ದುರಾಹಂಕಾರ, ದುರಾಸೆ, ಹೊಟ್ಟೆಕಿಚ್ಚು, ಅಸೂಯೆ ತುಂಬಿಕೊಂಡ ಮನಸ್ಸುಗಳನ್ನು ಗವಿಮಠದ ಜಾತ್ರೆ ಒಂದೊಮ್ಮೆ ಯೋಚಿಸುವಂತೆ ಮಾಡುತ್ತೆ. ದುಷ್ಟ ಮನಸ್ಸುಗಳಲ್ಲಿ ಬದಲಾವಣೆಯ ಬೀಜ ಬಿತ್ತುತ್ತೆ. ಹಾಗಾಗಿ ಕೊಪ್ಪಳದ ಗವಿಮಠದ ಜಾತ್ರೆಯನ್ನು ಇಡೀ ವಿಶ್ವವೇ ತಿರುಗಿ ನೋಡುತ್ತೆ.
ಸರ್ವಧರ್ಮೀಯರು ಸೇರಿ ನಡೆಸುವ ಜಾತ್ರೆ ಭಾವೈಕ್ಯತೆಗೆ ಒಂದಡೆ ಸಾಕ್ಷಿಯಾದ್ರೆ, ಇನ್ನೊಂದಡೆ ಸಮಾಜದಲ್ಲಿ ಪರಿವರ್ತನೆಗೆ ಪ್ರತಿ ವರ್ಷ ನಾಂದಿ ಹಾಡುತ್ತದೆ. ಯುವ ಸಮೂಹ, ವಿದ್ಯಾರ್ಥಿಗಳ ಮಧ್ಯೆ ಧರ್ಮ- ಜಾತಿ ವಿಷಬೀಜ ಬಿತ್ತುವ ದುಷ್ಟಶಕ್ತಿಗಳ ಮಧ್ಯೆ ಸಾಮಾಜಿಕ ಕಳಕಳಿಯನ್ನು ಜಾಥಾ ಮೂಲಕ ಮೂಡಿಸಿ ನಾವೆಲ್ಲರೂ ಒಂದೇ ಎನ್ನುವ ಭಾವೈಕ್ಯತೆಯ ಬೀಜವನ್ನು ಗವಿಮಠದ ಜಾತ್ರೆ ಬಿತ್ತುತ್ತದೆ. ಹಾಗಾಗಿ ಪ್ರತಿ ವರ್ಷ ಗಮಿಮಠದ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜಾತ್ರೆಗೆ ಬಂದು ಪರಿವರ್ತನೆಯಾಗಿರುವ ನಿದರ್ಶನಗಳು ಸಹ ಇವೆ.