ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶಿವರಾಜ್ ಕುಮಾರ್ ಕೆಲ ದಿನಗಳ ಹಿಂದೆ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದರು. ಕೆಲ ದಿನಗಳ ಹಿಂದೆ ಶಿವಣ್ಣನಿಗೆ ಶಸ್ತ್ರಚಿಕಿತ್ಸೆ ಸಹ ನಡೆಯಿತು. ಆ ದಿನ ರಾಜ್ಯದಾದ್ಯಂತ ಅಭಿಮಾನಿಗಳು ಶಿವಣ್ಣನ ಹೆಸರಲ್ಲಿ ವಿಶೇಷ ಪೂಜೆ, ಮೃತ್ಯುಂಜಯ ಹೋಮ, ಅನ್ನಸಂತರ್ಪಣೆಗಳನ್ನು ಮಾಡಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎಂದು ಆ ಬಳಿಕ ಗೀತಾ ಶಿವರಾಜ್ ಕುಮಾರ್, ನಿವೇದಿತಾ ಅವರುಗಳು ಮಾಹಿತಿ ಹಂಚಿಕೊಂಡಿದ್ದರು. ಇದೀಗ ಹೊಸ ವರ್ಷದಂದು ಸ್ವತಃ ಶಿವಣ್ಣ ಅಭಿಮಾನಿಗಳಿಗೆಂದು ವಿಡಿಯೋ ಮಾಡಿ ಹಂಚಿಕೊಂಡಿದ್ದು ತಮ್ಮ ಆರೋಗ್ಯದ ಬಗ್ಗೆ ಸ್ವತಃ ಮಾಹಿತಿ ನೀಡಿದ್ದಾರೆ.
ಬಳಿಕ ಮಾತನಾಡಿದ ಶಿವಣ್ಣ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು. ಬಳಿಕ ಮಾತನಾಡಿ, ‘ಅನಾರೋಗ್ಯದ ನಡುವೆಯೇ ಯಾವುದೋ ಜೋಶ್ನಲ್ಲಿ ಶೂಟಿಂಗ್ನಲ್ಲಿ ಭಾಗವಹಿಸಿಬಿಟ್ಟೆ. ಎಲ್ಲರೂ ಜೊತೆಗೆ ಇದ್ದರು ಕೀಮೋ ಮಾಡಿಸುತ್ತಿರಬೇಕಾದರೆ ‘45’ ಸಿನಿಮಾದ ಫೈಟ್ ಸೀನ್ನಲ್ಲಿ ಭಾಗವಹಿಸಿದ್ದೆ, ಅದರ ಶ್ರೇಯ ರವಿವರ್ಮಗೆ ಸಲ್ಲಬೇಕು. ಆದರೆ ಶಸ್ತ್ರಚಿಕಿತ್ಸೆ ದಿನ ಹತ್ತಿರ ಬಂದಂತೆ ತುಸು ಆತಂಕ ಇತ್ತು. ಆದರೆ ಅಭಿಮಾನಿಗಳು, ಗೆಳೆಯರು, ಸಹ ನಟರು, ಬಾಲ್ಯದ ಗೆಳೆಯರು ನೀಡಿದ ಬೆಂಬಲ ಧೈರ್ಯ ತುಂಬಿತು ಇಲ್ಲಿನ ವೈದ್ಯರು, ನರ್ಸ್ಗಳು ಬಹಳ ಚೆನ್ನಾಗಿ ಕಾಳಜಿ ಮಾಡಿದರು’ ಎಂದರು. ಹಲವರ ಹೆಸರು ಹೇಳಿ ಧನ್ಯವಾದಗಳನ್ನು ಹೇಳಿದರು. ಪತ್ನಿ ಗೀತಾ ಬಗ್ಗೆ ನೀಡಿದ ಬೆಂಬಲವನ್ನು ವಿಶೇಷವಾಗಿ ಕೊಂಡಾಡಿದರು.